ADVERTISEMENT

ಮಠಾಧೀಶರಿಗೆ ಸಿಗದ ಬೆಂಬಲ: ಧರಣಿ ಅರ್ಧಕ್ಕೆ ಮೊಟಕು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 20:00 IST
Last Updated 27 ಸೆಪ್ಟೆಂಬರ್ 2019, 20:00 IST
ಬಾಗಲಕೋಟೆಯ ಜಿಲ್ಲಾಡಳಿತ ಭವನದ ಎದುರು ಶುಕ್ರವಾರ ಧರಣಿಯಲ್ಲಿ ಪಾಲ್ಗೊಂಡಿದ್ದ ಮಠಾಧೀಶರು
ಬಾಗಲಕೋಟೆಯ ಜಿಲ್ಲಾಡಳಿತ ಭವನದ ಎದುರು ಶುಕ್ರವಾರ ಧರಣಿಯಲ್ಲಿ ಪಾಲ್ಗೊಂಡಿದ್ದ ಮಠಾಧೀಶರು   

ಬಾಗಲಕೋಟೆ: ನೆರೆಪೀಡಿತರ ನೆರವಿಗೆ ತುರ್ತಾಗಿ ಧಾವಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಶುಕ್ರವಾರ ಇಲ್ಲಿ ಮಠಾಧೀಶರ ನೇತೃತ್ವದಲ್ಲಿ ಆರಂಭವಾಗಿದ್ದ ಅನಿರ್ದಿಷ್ಟಾವಧಿ ಧರಣಿಗೆ ಜನಬೆಂಬಲ ಸಿಗಲಿಲ್ಲ. ಹಾಗಾಗಿ ಅವರು ಧರಣಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದರು.

ಜಿಲ್ಲೆಯ 30ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲದಿಂದ ಸಮೀಪದ ಗದ್ದನಕೇರಿ ಕ್ರಾಸ್‌ನಲ್ಲಿ ಧರಣಿ ಹಮ್ಮಿಕೊಳ್ಳಲಾಗಿತ್ತು. ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ ಬಂದು ಅಹವಾಲು ಸ್ವೀಕರಿಸುವವರೆಗೂ ಪ್ರತಿಭಟನೆ ಮುಂದುವರಿಯಲಿದೆ’ ಎಂದು ಸಂಘಟಕರು ಘೋಷಿಸಿದ್ದರು.

ಬೆಳಿಗ್ಗೆ ಧರಣಿ ಸ್ಥಳಕ್ಕೆ 10 ಮಂದಿ ಮಠಾಧೀಶರು ಹಾಗೂ ಸಂಘಟಕರಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಬಂದಿದ್ದರು. ಹೀಗಾಗಿ ಹೋರಾಟದ ಸ್ಥಳವನ್ನು ದಿಢೀರನೆ ಜಿಲ್ಲಾಧಿಕಾರಿ ಕಚೇರಿ ಮುಂದಕ್ಕೆ ಸ್ಥಳಾಂತರಿಸಿ ಎಲ್ಲರೂ ಅಲ್ಲಿಗೆ ತೆರಳಿದರು. ಅಲ್ಲಿ ಬ್ಯಾನರ್ ಕಟ್ಟಿ ಕಾದು ಕುಳಿತರೂ ಜನರು ಬರಲಿಲ್ಲ. ಹೀಗಾಗಿ ಮಠಾಧೀಶರು ಫೋಟೊಗೆ ‘ಪೋಸ್’ ನೀಡಿ ಅಲ್ಲಿಂದ ಮರಳಿದರು. ವಿಶೇಷವೆಂದರೆ ಧರಣಿ ಸ್ಥಳದ ಭದ್ರತೆಗೆ ನೂರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ADVERTISEMENT

ಶಿರೋಳದ ರಾಮಾರೂಢ ಮಠದ ಶಂಕರಾರೂಢ ಸ್ವಾಮೀಜಿ, ಚಿಕ್ಕಶೆಲ್ಲಿಕೇರಿಯ ಅಡಿವೇಶ್ವರ ಶಾಸ್ತ್ರಿ, ಹುಲ್ಯಾಳದ ಶ್ರದ್ಧಾನಂದ ಸ್ವಾಮೀಜಿ, ಗದ್ದನಕೇರಿ ಕಸ್ತೂರಿಮಠದ ಶಿವಾನಂದ ಸ್ವಾಮೀಜಿ, ಲಿಂಗನೂರಿನ ಶಿವಪುತ್ರ ಸ್ವಾಮೀಜಿ, ಕುಂಚನೂರಿನ ಸಿದ್ಧಲಿಂಗ ದೇವರು, ಆಲಗೂರಿನ ಲಕ್ಷ್ಮಣ ಮುತ್ಯಾ, ಜಮಖಂಡಿಯ ಕೃಷ್ಣಾನಂದ ಸ್ವಾಮೀಜಿ, ಗಣಿಯ ಚಿನ್ಮಯಾನಂದ ಸ್ವಾಮೀಜಿ, ರೂಗಿಯ ನಿತ್ಯಾನಂದ ಶ್ರೀ ಇದ್ದರು.

‘ದುಷ್ಟಶಕ್ತಿಗಳು ತಡೆಯೊಡ್ಡಿದವು’: ‘ಗದ್ದನಕೇರಿ ಕ್ರಾಸ್‌ನಲ್ಲಿ ಧರಣಿ ನಡೆಯದಂತೆ ಕೆಲವು ದುಷ್ಟಶಕ್ತಿಗಳು ತಡೆದವು. ಕೆಲ ರಾಜಕಾರಣಿಗಳೂ ಜನ ಬಾರದಂತೆ ನೋಡಿಕೊಂಡರು. ಪೊಲೀಸರ ಮೂಲಕ ನಮ್ಮನ್ನು ದಾರಿ ತಪ್ಪಿಸಿದರು’ ಎಂದು ಚಿಕ್ಕಶೆಲ್ಲಿಕೇರಿ ಆಶ್ರಮದ ಅಡಿವೇಶ್ವರ ಶಾಸ್ತ್ರಿಗಳು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.