ADVERTISEMENT

ರಸ್ತೆ ದುರಸ್ತಿಗಾಗಿ ಪ್ರತಿಭಟನೆ

10 ನೇ ದಿನ ಪೂರೈಸಿದರೂ ಸಿಗದ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 20:15 IST
Last Updated 1 ನವೆಂಬರ್ 2018, 20:15 IST
ಹದಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ದೇವದುರ್ಗದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಆರಂಭಿಸಿರುವ ಧರಣಿ ಗುರುವಾರ 10ನೇ ದಿನ ಪೂರೈಸಿತು
ಹದಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ದೇವದುರ್ಗದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಆರಂಭಿಸಿರುವ ಧರಣಿ ಗುರುವಾರ 10ನೇ ದಿನ ಪೂರೈಸಿತು   

ರಾಯಚೂರು: ವಾಹನಗಳು ಸಂಚರಿಸಲು ಅಸಾಧ್ಯವಾದ ಸ್ಥಿತಿಯಲ್ಲಿರುವ ರಸ್ತೆಯನ್ನು ದುರಸ್ತಿ ಮಾಡಿಸುವಂತೆ ಒತ್ತಾಯಿಸಿ ದೇವದುರ್ಗದಲ್ಲಿ ವಿವಿಧ ಗ್ರಾಮಗಳ ಶಾಲಾ, ಕಾಲೇಜು ವಿದ್ಯಾರ್ಥಿಗಳು ಆರಂಭಿಸಿರುವ ಧರಣಿ ಗುರುವಾರ 10ನೇ ದಿನ ಪೂರೈಸಿದೆ. ಧರಣಿಯಲ್ಲಿ ವಿದ್ಯಾರ್ಥಿನಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಗಮನ ಸೆಳೆದಿದೆ.

ದೇವದುರ್ಗದಿಂದ ಕೊಪ್ಪರ ಮಾರ್ಗದಲ್ಲಿರುವ ಯಾಟಗಲ್, ಹೇರೂರು ಮತ್ತು ಗೂಗಲ್ ಗ್ರಾಮಗಳ ವಿದ್ಯಾರ್ಥಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಈ ಮಧ್ಯೆ ಶಾಲಾ, ಕಾಲೇಜುಗಳ ಪ್ರಾಂಶುಪಾಲರು ಧರಣಿ ಸ್ಥಳಕ್ಕೆ ಬಂದು, ಧರಣಿನಿರತರನ್ನು ಕಾಲೇಜುಗಳಿಗೆ ಬರುವಂತೆ ಪ್ರತಿದಿನ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಕೆಲವರು ಭಯದಿಂದ ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಆದರೆ, ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಈವರೆಗೂ ಮಾಡುತ್ತಿಲ್ಲ.

ಅರ್ಧಕ್ಕೆ ಕೈಬಿಟ್ಟಿರುವ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿ ಹೈದರಾಬಾದ್– ಕರ್ನಾಟಕ ಕೋಲಿ ಸೈನ್ಯ ಸಂಘಟನೆಯ ವಿಭಾಗೀಯ ಅಧ್ಯಕ್ಷ ತಿರುಪತಿ ಎನ್.ಮ್ಯಾಗೇರಿ ಅವರ ನೇತೃತ್ವದಲ್ಲಿ ಧರಣಿ ಆರಂಭವಾಗಿತ್ತು.

ADVERTISEMENT

ರ‍್ಯಾಲಿ ಮೂಲಕ ಜಿಲ್ಲಾಡಳಿತದ ಗಮನ ಸೆಳೆಯುವ ಕೆಲಸ ಮಾಡಿದ್ದ ವಿದ್ಯಾರ್ಥಿಗಳು ಮೂರು ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಧರಣಿಯು ದಿನದಿಂದ ದಿನಕ್ಕೆ ಸಾರ್ವಜನಿಕರ ಗಮನ ಸೆಳೆಯುತ್ತಿದ್ದರೂ ಸೂಕ್ತ ಸ್ಪಂದನೆ ಮಾತ್ರ ಸಿಗುತ್ತಿಲ್ಲ ಎನ್ನುವ ಅಳಲನ್ನು ಅವರು
ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.