ADVERTISEMENT

ಸದಾಶಿವ ಆಯೋಗದ ವರದಿ ಜಾರಿಗಾಗಿ ಶಕ್ತಿ ಪದರ್ಶನ

* ಬೃಹತ್ ಪ್ರತಿಭಟನಾ ಮೆರವಣಿಗೆ * ಸಚಿವ ಶ್ರೀರಾಮುಲು ಭೇಟಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 20:53 IST
Last Updated 8 ಮಾರ್ಚ್ 2021, 20:53 IST
ನ್ಯಾ. ಸದಾಶಿವ ವರದಿ ಜಾರಿ ಹೋರಾಟ ಸಮಿತಿಯಿಂದ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನ – ಪ್ರಜಾವಾಣಿ ಚಿತ್ರ
ನ್ಯಾ. ಸದಾಶಿವ ವರದಿ ಜಾರಿ ಹೋರಾಟ ಸಮಿತಿಯಿಂದ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನ – ಪ್ರಜಾವಾಣಿ ಚಿತ್ರ   

ಬೆಂಗಳೂರು: ’ಒಳ ಮೀಸಲಾತಿ ಕುರಿತು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ನೀಡಿರುವ ವರದಿಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿ ಸಾವಿರಾರು ಮಂದಿ ನಗರದಲ್ಲಿ ಸೋಮವಾರ ಶಕ್ತಿ ಪ್ರದರ್ಶನ ಮಾಡಿದರು.

ನ್ಯಾಯಮೂರ್ತಿ ಸದಾಶಿವ ವರದಿ ಜಾರಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ‘ಮಾದಿಗ ಚೈತನ್ಯ ರಥಯಾತ್ರೆ’ ಪ್ರಯುಕ್ತ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಸಾಗಿದ ಮೆರವಣಿಗೆಯಲ್ಲಿ ಘೋಷಣಾ ಫಲಕಗಳನ್ನು ಪ್ರದರ್ಶಿಸಲಾಯಿತು.

‘ರಾಜ್ಯದ ಹಲವು ಜಿಲ್ಲೆಗಳ ಸಮಾಜದ ಜನರು ವಾಹನಗಳ ಮೂಲಕ ನಗರಕ್ಕೆ ಬಂದಿದ್ದರು. ಅವರೆಲ್ಲರೂ ಮೆರವಣಿಗೆಯಲ್ಲಿ ಪಾಲ್ಗೊಂಡು, ವರದಿ ಜಾರಿಗೆ ಆಗ್ರಹಿಸಿದರು. ಸ್ವಾತಂತ್ರ್ಯ ಉದ್ಯಾನದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಬಹಿರಂಗ ಸಭೆ ಸಹ ನಡೆಸಲಾಯಿತು.

ADVERTISEMENT

‘ಎಲ್ಲ ಜಾತಿ, ಜನಾಂಗ ಹಾಗೂ ಧರ್ಮದವರಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಮತ್ತು ಅವಕಾಶಗಳಲ್ಲಿ ಸಮಾನತೆ ಸಿಗಬೇಕೆಂದು ಅಂಬೇಡ್ಕರ್‌ ಅವರು ಸಂವಿಧಾನದ ಮುನ್ನುಡಿಯಲ್ಲಿ ಹೇಳಿದ್ದಾರೆ. ಆದರೆ, ರಾಜ್ಯದ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಶಿಕ್ಷಣ, ಸರ್ಕಾರಿ ಉದ್ಯೋಗ, ಭೂಮಿ ಹಾಗೂ ಸಂಪತ್ತಿನಲ್ಲಿ ಸಮಾನ ಪಾಲು ಸಿಗದೇ ಅನ್ಯಾಯ ಆಗುತ್ತಿದೆ’ ಎಂದು ಪ್ರತಿಭಟನಕಾರರು ದೂರಿದರು.

‘ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಅಧಿಕಾರ ನಡೆಸಿದರೂ 40 ವರ್ಷಗಳಿಂದ ಮಾದಿಗ ಸಮಾಜಕ್ಕೆ ಒಳ ಮೀಸಲಾತಿ ನೀಡಿಲ್ಲ. ಇದರಿಂದಾಗಿ ಮಾದಿಕ ಸಮಾಜಕ್ಕೆ ಸಿಗಬೇಕಾದ ಸೌಲಭ್ಯಗಳು ಹಾಗೂ ಉದ್ಯೋಗಗಳು ಬೇರೆಯವರ ಪಾಲಾಗುತ್ತಿವೆ’ ಎಂದೂ ಆರೋಪಿಸಿದರು.

‘ತಮಿಳುನಾಡು ಸರ್ಕಾರ ಈಗಾಗಲೇ ಒಳ ಮೀಸಲಾತಿ ಜಾರಿಗೊಳಿಸಿರುವ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಸಂವಿಧಾನದ ಆಶಯಗಳು ನೆರವೇರಬೇಕಾದರೆ, ಒಳ ಮೀಸಲಾತಿ ಕುರಿತ ಸದಾಶಿವ ಆಯೋಗದ ವರದಿ ಜಾರಿಗೊಳಿಸಬೇಕು’ ಎಂದೂ ಅವರು ಒತ್ತಾಯಿಸಿದರು.

ಶ್ರೀರಾಮುಲು ಭೇಟಿ: ಹೋರಾಟ ಸ್ಥಳಕ್ಕೆ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಭೇಟಿ ನೀಡಿ, ಪ್ರತಿಭಟನನಿರತರಿಂದ ಮನವಿ ಪತ್ರ ಸ್ವೀಕರಿಸಿರು.

‘ಆಯೋಗದ ವರದಿ ಜಾರಿಗೆ ಕ್ರಮ ಕೈಗೊಳ್ಳುವ ಬಗ್ಗೆ ಉಪ ಸಮಿತಿ ರಚಿಸಲಾಗಿದೆ. ಸದ್ಯಕ್ಕೆ ಪ್ರತಿಭಟನೆ ಕೈಬಿಡಿ’ ಎಂದರು. ‘ವರದಿ ತ್ವರಿತವಾಗಿ ಜಾರಿಗೆ ತರಬೇಕು. ಇಲ್ಲದಿದ್ದರೆ, ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ ಪ್ರತಿಭಟನಕಾರರು, ಪ್ರತಿಭಟನೆ ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.