ADVERTISEMENT

ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ: ಸಿಐಡಿ ತನಿಖೆ ಆರಂಭ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 8:16 IST
Last Updated 10 ಏಪ್ರಿಲ್ 2022, 8:16 IST
   

ಬೆಂಗಳೂರು: 545 ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಆರಂಭಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, ಕಲಬುರಗಿಯ ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿರುವ ಶಂಕೆ ಇದೆ. ಅಲ್ಲಿನ ಚೌಕ್‌ ಠಾಣೆಯಲ್ಲಿ ವೀರೇಶ್‌ ಮತ್ತು ಇತರರ ವಿರುದ್ಧ ಶನಿವಾರ ಎಫ್‌ಐಆರ್‌ ದಾಖಲಿಸಿದ್ದು, ನಂತರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ ಎಂದರು.

ವೀರೇಶ್‌ ಎಂಬ ಅಭ್ಯರ್ಥಿ 21 ಅಂಕಗಳ ಪ್ರಶ್ನೆಗಳಿಗೆ ಉತ್ತರಿಸಿರಲಿಲ್ಲ. ಆದರೂ, ಆತನಿಗೆ 100 ಅಂಕಗಳು ಬಂದಿವೆ. ಆತನ ಓಎಂಆರ್‌ ಹಾಳೆ ಮತ್ತು ಮೂಲ ಉತ್ತರ ಪತ್ರಿಕೆ ನಡುವೆ ತಾಳೆಯಾಗುತ್ತಿಲ್ಲ. ಗುರುವಾರ ಈ ದಾಖಲೆಗಳು ನಮಗೆ ದೊರಕಿದ್ದವು. ಶನಿವಾರವೇ ಎಫ್‌ಐಆರ್‌ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದು ವಿವರ ನೀಡಿದರು.

ADVERTISEMENT

ಸಿಐಡಿ ಪೊಲೀಸರ ತಂಡ ಈಗಾಗಲೇ ಕಲಬುರಗಿ ತಲುಪಿದೆ. ವೀರೇಶ್‌ ಎಂಬ ಅಭ್ಯರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಯಾವುದೇ ವ್ಯಕ್ತಿಗಳು ಅಕ್ರಮದಲ್ಲಿ ಭಾಗಿಯಾಗಿದ್ದರೂ ಅವರನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಗೃಹ ಸಚಿವರು ಹೇಳಿದರು.

ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ತಾತ್ಕಾಲಿ ಕ ಆಯ್ಕೆ ಪಟ್ಟಿಯನ್ನು ಇತ್ತೀಚೆಗೆ ಪ್ರಕಟಿಸಲಾಗಿತ್ತು. ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಸಾರ್ವಜನಿಕರಲ್ಲಿ ಮೂಡಿತ್ತು. ಆದರೆ, ದಾಖಲೆಗಳು ಸಿಕ್ಕಿರಲಿಲ್ಲ. ಸಾಕ್ಷ್ಯಾಧಾರಗಳು ಲಭಿಸುತ್ತಿದ್ದಂತೆಯೇ ತನಿಖೆ ಆರಂಭಿಸಲಾಗಿದೆ ಎಂದರು.

ಕಷ್ಟಪಟ್ಟು ಓದಿ, ನ್ಯಾಯಯುತವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯ ಆಗಬಾರದು. ಈ ಕಾರಣದಿಂದ ಸತ್ಯಾಸತ್ಯತೆಯನ್ನು ಹೊರತರಲು ಸಮಗ್ರವಾಗಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.