ADVERTISEMENT

ಪಿಎಸ್‌ಐ: ಪ್ರಥಮ ಪತ್ರಿಕೆಯಲ್ಲೂ ಅಕ್ರಮ ಶಂಕೆ

ಪರೀಕ್ಷೆ ನಡೆದ 92 ಕೇಂದ್ರಗಳಲ್ಲೂ ಪರಿಶೀಲನೆ ನಡೆಸಲು ತೀರ್ಮಾನ

​ಪ್ರಜಾವಾಣಿ ವಾರ್ತೆ
Published 8 ಮೇ 2022, 22:45 IST
Last Updated 8 ಮೇ 2022, 22:45 IST
   

ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆಯ ಪ್ರಥಮ ಪತ್ರಿಕೆಯಲ್ಲೂ (‍ಪತ್ರಿಕೆ–1) ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಪ್ರಬಂಧ, ಭಾಷಾಂತರ ಹಾಗೂ ಸಂಕ್ಷಿಪ್ತಗೊಳಿಸುವಿಕೆಯನ್ನು ಒಳಗೊಂಡಿರುವ ಈ ಪತ್ರಿಕೆ ಒಟ್ಟು 50 ಅಂಕಗಳದ್ದಾಗಿತ್ತು. ಕನ್ನಡದಿಂದ ಇಂಗ್ಲಿಷ್‌ಗೆ ಹಾಗೂ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಲು ತಲಾ 10 ಅಂಕಗಳನ್ನು ನಿಗದಿ ಮಾಡಲಾಗಿತ್ತು. 20 ಅಂಕಗಳಿಗಾಗಿ ಅಭ್ಯರ್ಥಿಗಳು ವಿಷಯವೊಂದರ ಮೇಲೆ ದೀರ್ಘ ಪ್ರಬಂಧ ರಚಿಸಬೇಕಾಗುತ್ತದೆ. 700 ರಿಂದ 800 ಪದಗಳ ಸುದ್ದಿಯೊಂದನ್ನು 100 ಪದಗಳಿಗೆ ಸಂಕ್ಷಿಪ್ತಗೊಳಿಸಬೇಕು. ಇದಕ್ಕೆ 10 ಅಂಕಗಳನ್ನು ನಿಗದಿ ಮಾಡಲಾಗಿತ್ತು.

‘ಹಲವು ಅಭ್ಯರ್ಥಿಗಳು ಭಾಷಾಂತರ ಹಾಗೂ ಪ್ರಬಂಧ ಬರೆಯುವುದಕ್ಕಾಗಿ ಬ್ಲೂಟೂತ್‌ ಉಪಕರಣಗಳ ನೆರವು ಪಡೆದಿರುವ ಅನುಮಾನ ವ್ಯಕ್ತವಾಗಿದೆ. ಈ ದಿಸೆಯಲ್ಲಿ ತನಿಖೆ ಮುಂದುವರಿಸಲಾಗಿದ್ದು, ಅಗತ್ಯ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ADVERTISEMENT

ಪರೀಕ್ಷೆ ನಡೆದ 92 ಕೇಂದ್ರಗಳಲ್ಲೂ ಪರಿಶೀಲನೆ ನಡೆಸಲು ಸಿಐಡಿ ಅಧಿಕಾರಿಗಳ ತಂಡ ನಿರ್ಧರಿಸಿರುವುದಾಗಿ ಗೊತ್ತಾಗಿದೆ.

ಎಂಟು ತಂಡಗಳ ರಚನೆ: ಅಕ್ರಮದ ಜಾಲ ರಾಜ್ಯದ ವಿವಿಧ ಜಿಲ್ಲೆಗಳಿಗೂ ವ್ಯಾಪಿಸಿರುವ ಸಾಧ್ಯತೆ ಇರುವುದರಿಂದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿರುವ ಸಿಐಡಿ ಅಧಿಕಾರಿಗಳು ಡಿವೈಎಸ್‌ಪಿಗಳ ನೇತೃತ್ವದಲ್ಲಿ ಎಂಟು ವಿಶೇಷ ತಂಡಗಳನ್ನು ರಚಿಸಿದ್ದಾರೆ.

‘ಡಿಜಿಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳೂ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದ್ದು ಈ ನಿಟ್ಟಿನಲ್ಲೂ ತನಿಖೆ ನಡೆಸಲು ತೀರ್ಮಾನಿಸಲಾಗಿದೆ’ ಎಂದೂಸಿಐಡಿ ಮೂಲಗಳು ಮಾಹಿತಿ ನೀಡಿವೆ.

‘ಗುಪ್ತಚರ ವಿಭಾಗದ ಅಧಿಕಾರಿಗಳ ತಂಡ ಇವರ ಮೇಲೆ ವಿಶೇಷ ನಿಗಾ ಇಟ್ಟಿದ್ದು, ವಿವಿಧ ಮೂಲಗಳಿಂದ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದೆ’ ಎಂದೂ ಹೇಳಿವೆ.

‘ಕೆಲ ಆರೋಪಿಗಳು ಪ್ರಕರಣ ಬಯಲಾದ ನಂತರ ನಾಪತ್ತೆಯಾಗಿದ್ದಾರೆ.27 ದಿನಗಳಿಂದ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಮೊಬೈಲ್‌ ಟವರ್‌ಗಳ ಆಧಾರದಲ್ಲಿ ಅವರಿರುವ ಸ್ಥಳ ಪತ್ತೆಮಾಡಲು ಪ್ರಯತ್ನಿಸಲಾಗುತ್ತಿದೆ. ಅಕ್ರಮದಲ್ಲಿ ಭಾಗಿಯಾಗಿರುವವರ ಪೈಕಿ ಕೆಲವರು ‘ಫ್ಲ್ಯಾಷ್‌’ ಮಾಡಿಸಿ ಮೊಬೈಲ್‌ನಲ್ಲಿದ್ದ ದತ್ತಾಂಶಗಳನ್ನು ನಾಶಪಡಿಸಿರುವುದಾಗಿ ಗೊತ್ತಾಗಿದೆ. ಅವರ ಮೊಬೈಲ್‌ಗಳನ್ನು ಜಪ್ತಿ ಮಾಡಿ ವಾಟ್ಸ್‌ಆ್ಯಪ್‌, ಟೆಲಿಗ್ರಾಮ್‌, ಮೆಸೆಂಜರ್‌ ಮೂಲಕ ವಿನಿಮಯವಾಗಿರುವ ಮಾಹಿತಿಗಳನ್ನು ಕಲೆ ಹಾಕಲು ಪ್ರಯತ್ನಿಸಲಾಗುತ್ತಿದೆ’ ಎಂದೂ ಮೂಲಗಳು ಹೇಳಿವೆ.

ಬೆಂಗಳೂರಿನ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿಗಳು ಮಹಜರು ನಡೆಸಿದ್ದು ಕಂಪ್ಯೂಟರ್‌ ಸೇರಿದಂತೆ ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ ಎಂದೂ ಗೊತ್ತಾಗಿದೆ.

ಬ್ಲೂಟೂತ್‌ ಜಾಡು ಹಿಡಿದು ಹೊರಟ ತಂಡ:

ಪಿಎಸ್‌ಐ ಅಕ್ರಮದಲ್ಲಿ ಬಳಕೆಯಾಗಿರುವ ಬ್ಲೂಟೂತ್‌ ಉಪಕರಣಗಳ ಜಾಡು ಹಿಡಿದಿರುವ ಸಿಐಡಿ ತಂಡ, ಇವುಗಳನ್ನು ಎಲ್ಲಿಂದ ತರಲಾಗಿದೆ, ಪೂರೈಕೆ ಮಾಡಿದವರು ಯಾರು ಎಂಬುದರ ಕುರಿತ ಮಾಹಿತಿ ಕಲೆಹಾಕುತ್ತಿದೆ.

‘ಹೋದ ವರ್ಷ ನಡೆದಿದ್ದ ಎಫ್‌ಡಿಎ ಪರೀಕ್ಷೆಯಲ್ಲೂ ಬ್ಲೂಟೂತ್‌ ಬಳಸಿ ಅಕ್ರಮ ನಡೆಸಲಾಗಿತ್ತು. ಈ ಸಂಬಂಧ ಶಿವರಾಜ್‌ ಪಾಟೀಲ ಹಾಗೂ ಇತರರನ್ನು ಪೊಲೀಸರು ಬಂಧಿಸಿದ್ದರು. ಪಿಎಸ್‌ಐ ಅಕ್ರಮದಲ್ಲಿ ಬಳಕೆಯಾಗಿರುವ ಬ್ಲೂಟೂತ್‌ ಗಳನ್ನೂ ಈ ತಂಡದವರೇ ಪೂರೈಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ’ ಎಂದೂ ಸಿಐಡಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.