ADVERTISEMENT

ಪಿಎಸ್‌ಐ ಅಕ್ರಮ: ಮೊದಲ ರ‍್ಯಾಂಕ್ ಪಡೆದಿದ್ದ ಕುಶಾಲ್ ಕುಮಾರ್ ವಶಕ್ಕೆ

*ಪಿಎಸ್‌ಐ ನೇಮಕಾತಿ ಅಕ್ರಮ * ₹ 80 ಲಕ್ಷ ನೀಡಿರುವ ಆರೋಪ?

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 19:36 IST
Last Updated 9 ಜೂನ್ 2022, 19:36 IST
ಕುಶಾಲ್‌ ಕುಮಾರ್
ಕುಶಾಲ್‌ ಕುಮಾರ್   

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಮತ್ತಷ್ಟು ಚುರುಕುಗೊಳಿಸಿದ್ದು, ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ ಅಭ್ಯರ್ಥಿ ಕುಶಾಲ್‌ಕುಮಾರ್ ಜೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಜುಟ್ಟನಹಳ್ಳಿಯ ಕುಶಾಲ್‌ಕುಮಾರ್, ಒಎಂಆರ್ ಪ್ರತಿ ತಿದ್ದಿಸಿ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ಇತರೆ ಪುರಾವೆ ಆಧರಿಸಿ ಕುಶಾಲ್‌ಕುಮಾರ್‌ನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಎಂಜಿನಿಯರಿಂಗ್ ಪದವೀಧರ ಕುಶಾಲ್, ಹಲಸೂರು ಗೇಟ್ ಠಾಣೆ ವ್ಯಾಪ್ತಿಯ ಕೇಂದ್ರವೊಂದರಲ್ಲಿ ಪರೀಕ್ಷೆ ಬರೆದಿದ್ದ. ಆತನ ಆಪ್ತರೊಬ್ಬರು, ಪೊಲೀಸ್ ನೇಮಕಾತಿ ವಿಭಾಗದ ನೌಕರರ ಜೊತೆ ಮಾತುಕತೆ ನಡೆಸಿ ಒಎಂಆರ್ ಪ್ರತಿ ತಿದ್ದಲು ಒಪ್ಪಿಸಿದ್ದರು. ಅದಕ್ಕಾಗಿ ₹ 80 ಲಕ್ಷ ನೀಡಿರುವ ಮಾಹಿತಿಯೂ ಇದೆ, ಈ ಬಗ್ಗೆ ಅಭ್ಯರ್ಥಿಯಿಂದ ಮಾಹಿತಿ ಕಲೆಹಾಕಬೇಕಿದೆ’ ಎಂದೂ ತಿಳಿಸಿವೆ.

ADVERTISEMENT

‘ಪತ್ರಿಕೆ–1ರಲ್ಲಿ (ಪ್ರಬಂಧ, ಭಾಷಾಂತರ, ಸಾರಾಂಶ ಬರಹ) 30.5 ಅಂಕ ಹಾಗೂ ಪತ್ರಿಕೆ–2ರಲ್ಲಿ (ಸಾಮಾನ್ಯ ಅಧ್ಯಯನ) 137.25 ಅಂಕ ಪಡೆದಿದ್ದ. ಒಟ್ಟು 167.75 ಅಂಕಗಳೊಂದಿಗೆ ಮೊದಲ ರ‍್ಯಾಂಕ್ ಪಡೆದಿದ್ದ. ಪತ್ರಿಕೆ–1ರಲ್ಲೂ ಆರೋಪಿ ಅಕ್ರಮ ಎಸಗಿರುವ ಅನುಮಾನವಿದೆ’ ಎಂದೂ ಹೇಳಿವೆ.

‘ಜೆಡಿಎಸ್‌ ಮುಖಂಡನ ಮಗ’
‘ಅಭ್ಯರ್ಥಿ ಕುಶಾಲ್‌ಕುಮಾರ್, ಜೆಡಿಎಸ್‌ ಮುಖಂಡ ಜುಟ್ಟನಹಳ್ಳಿ ಜಯರಾಮಯ್ಯ ಅವರ ಪುತ್ರ. ಪ್ರಕರಣದಲ್ಲಿ ತಂದೆ ಪಾತ್ರದ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.