ADVERTISEMENT

ಪಿಎಸ್‌ಐ ಅಕ್ರಮ: ಮಧ್ಯವರ್ತಿಗಳ ಪಟ್ಟಿ ಸಿದ್ಧ

​ಪ್ರಜಾವಾಣಿ ವಾರ್ತೆ
Published 29 ಮೇ 2022, 19:31 IST
Last Updated 29 ಮೇ 2022, 19:31 IST
   

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ಅಭ್ಯರ್ಥಿಗಳಿಂದ ಹಣ ಪಡೆದಿದ್ದ ಮಧ್ಯವರ್ತಿಗಳ ಪಟ್ಟಿ ಸಿದ್ಧಪಡಿಸಿದ್ದಾರೆ. ಅವರೆಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಪ್ರಕರಣದಲ್ಲಿ ಬಂಧಿಸಿರುವ ಪೊಲೀಸ್ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಹಾಗೂ ಇತರೆ ನೌಕರರು, ಹಲವು ಮಧ್ಯವರ್ತಿಗಳ ಹೆಸರು ಬಾಯ್ಬಿಟ್ಟಿದ್ದಾರೆ. ಇತ್ತೀಚೆಗೆ ವಿಚಾರಣೆ ಎದುರಿಸಿದ್ದ ಎಡಿಜಿಪಿ ಅಮ್ರಿತ್ ಪೌಲ್ ಅವರಿಂದಲೂ ಮಧ್ಯವರ್ತಿಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿರುವುದಾಗಿ ಮೂಲಗಳು ಹೇಳಿವೆ.

‘ನಾಲ್ಕಕ್ಕಿಂತ ಹೆಚ್ಚು ತಂಡಗಳು, ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನು ಸಂಪರ್ಕಿಸಿ ಅಕ್ರಮ ಎಸಗಿರುವುದು ಗೊತ್ತಾಗಿದೆ. ಕೆಲವರು, ಪಿಎಸ್ಐ ನೇಮಕಾತಿ ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನವೇ ಅಭ್ಯರ್ಥಿಗಳಿಂದ ಹಣ ಪಡೆದಿದ್ದ ಮಾಹಿತಿಯೂ ಇದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ADVERTISEMENT

‘ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಹಲವರು ಮಧ್ಯವರ್ತಿಗಳಾಗಿ ಕೆಲಸ ಮಾಡಿದ್ದಾರೆ. ಕೆಲ ಪೊಲೀಸರು, ಕೆಲ ಸರ್ಕಾರಿ ನೌಕರರು, ಕೆಲ ರಾಜಕಾರಣಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇವರಿಗೆ ಹಣ ನೀಡಿದ್ದ ಅಭ್ಯರ್ಥಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಅವರ ಹೇಳಿಕೆ ಆಧರಿಸಿ ಮಧ್ಯವರ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದೂ ಹೇಳಿವೆ.

‘ಮಧ್ಯವರ್ತಿಗಳ ಪೈಕಿ ಕೆಲವರು ಉನ್ನತ ಸ್ಥಾನದಲ್ಲಿದ್ದಾರೆ. ಅವರೆಲ್ಲರನ್ನೂ ವಿಚಾರಣೆ ಮಾಡಬೇಕಾದರೆ ಸೂಕ್ತ ಪುರಾವೆ ಅಗತ್ಯವಿದೆ. ಹೀಗಾಗಿ, ಪುರಾವೆ ಸಂಗ್ರಹಿಸಲು ವಿಶೇಷ ತಂಡಗಳು ಕೆಲಸ ಮಾಡುತ್ತಿವೆ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.