ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: ಡಾ.ಸಿ.ಎನ್. ಅಶ್ವತ್ಥ ನಾರಾಯಣ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2025, 16:13 IST
Last Updated 3 ಫೆಬ್ರುವರಿ 2025, 16:13 IST
<div class="paragraphs"><p>ಡಾ.ಸಿ.ಎನ್. ಅಶ್ವತ್ಥ ನಾರಾಯಣ</p></div>

ಡಾ.ಸಿ.ಎನ್. ಅಶ್ವತ್ಥ ನಾರಾಯಣ

   

ಬೆಂಗಳೂರು: ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ಭರ್ತಿಗೆ ನಡೆದ ನೇಮಕಾತಿಯಲ್ಲಿ ನಡೆದಿದ್ದ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ವಿಶೇಷ ತನಿಖಾ ತಂಡ (ಎಸ್ಐಟಿ)ದ ವಿಚಾರಣೆ ಎದುರಿಸಿದ್ದಾರೆ.

ಎಸ್‌ಐಟಿ ನೋಟಿಸ್ ನೀಡಿದ್ದ ಕಾರಣ ತನಿಖಾಧಿಕಾರಿ ಎದುರು ಹಾಜರಾದ ಅಶ್ವತ್ಥ ನಾರಾಯಣ, ‘ನನಗೂ ಅಕ್ರಮ ನೇಮಕಾತಿಗೂ ಸಂಬಂಧವಿಲ್ಲ. ಯಾವುದೇ ಅಭ್ಯರ್ಥಿಯ ಪರಿಚಯವೂ ಇಲ್ಲ. ಯಾರಿಗೂ ಹುದ್ದೆ ಕೊಡಿಸಲು ಶಿಫಾರಸು ಮಾಡಿಸಿಲ್ಲ ಎಂದು ತಿಳಿಸಿದ್ದಾರೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ADVERTISEMENT

ಮಾಗಡಿ ನಿವಾಸಿಯಾದ ಅವರ ಹತ್ತಿರ ಸಂಬಂಧಿಯೊಬ್ಬರ ಆಯ್ಕೆಯಲ್ಲಿ ಅಶ್ವತ್ಥ ನಾರಾಯಣ ಅವರ ಪಾತ್ರವಿದೆ ಎಂದು ಆರೋಪಿಸಲಾಗಿತ್ತು. ಹಾಗಾಗಿ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಿತ್ತು.

‘ಪಿಎಸ್ಐ ನೇಮಕಾತಿ ಅಕ್ರಮದ ತನಿಖೆಗೆ ಸಂಬಂಧಿಸಿದಂತೆ ಎಸ್ಐಟಿಯವರು ಅಶ್ವತ್ಥ ನಾರಾಯಣ ಅವರನ್ನು ಯಾವ ವಿಚಾರಕ್ಕೆ ವಿಚಾರಣೆಗೆ ಕರೆದಿದ್ದಾರೆ ಎಂಬುದರ ಬಗ್ಗೆ ಗೊತ್ತಿಲ್ಲ. ತನಿಖೆ ಇನ್ನೂ ಮುಗಿದಿಲ್ಲ. ಎಸ್ಐಟಿಯವರಿಗೆ ತನಿಖೆ ವೇಳೆ ಯಾವ ಮಾಹಿತಿ ಸಿಗುತ್ತದೆಯೋ, ಅದನ್ನು ಆಧರಿಸಿ ಸಂಬಂಧಿಸಿದವರನ್ನು ವಿಚಾರಣೆಗೆ ಕರೆಯುತ್ತಾರೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ರಾಜ್ಯ ಪೊಲೀಸ್ ಇಲಾಖೆಯಲ್ಲಿ 545 ಪಿಎಸ್‌ಐ ಹುದ್ದೆಗಳ ಭರ್ತಿಗೆ 2021ರ ಅಕ್ಟೋಬರ್‌ನಲ್ಲಿ ನಡೆದ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದ ಆರೋಪ ಕೇಳಿ ಬಂದಿತ್ತು. ಹೀಗಾಗಿ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿತ್ತು.

ಎಸ್‌ಐಟಿ ತನಿಖೆಯಲ್ಲಿ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿತ್ತು. 52 ಅಭ್ಯರ್ಥಿಗಳು, ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ, ಡಿವೈಎಸ್‌ಪಿ, ಕಾನ್‌ಸ್ಟೇಬಲ್‌ಗಳು, ಇನ್‌ಸ್ಪೆಕ್ಟರ್‌ಗಳು, ಮಧ್ಯವರ್ತಿಗಳು ಸೇರಿ 100ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.