ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: ತಂದೆ, ಪತ್ನಿ, ಮಗಳ ಹೆಸರಿನಲ್ಲಿ ಎಡಿಜಿಪಿ ಪೌಲ್ ಆಸ್ತಿ

ಮುದ್ರಾಂಕ ಮಹಾಪರಿವೀಕ್ಷಕರಿಗೆ ಪತ್ರ ಬರೆದ ಸಿಐಡಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 19:45 IST
Last Updated 14 ಆಗಸ್ಟ್ 2022, 19:45 IST
ಅಮ್ರಿತ್ ಪೌಲ್
ಅಮ್ರಿತ್ ಪೌಲ್   

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಎಡಿಜಿಪಿ ಅಮ್ರಿತ್ ಪೌಲ್, ಅಕ್ರಮದ ಮೂಲಕ ಗಳಿಸಿದ್ದ ಹಣದಲ್ಲಿ ತಮ್ಮ ತಂದೆ, ಪತ್ನಿ ಹಾಗೂ ಮಗಳ ಹೆಸರಿನಲ್ಲಿ ಆಸ್ತಿ ಖರೀದಿ ಮಾಡಿರುವ ಬಗ್ಗೆ ಸಿಐಡಿ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ.

‘ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರೂ ಆಗಿದ್ದ ಅಮ್ರಿತ್ ಪೌಲ್, ಡಿವೈಎಸ್ಪಿ ಹಾಗೂ ಸಿಬ್ಬಂದಿ ಜೊತೆ ಸೇರಿ ಸಂಚು ರೂಪಿಸಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಪಡೆದು ಅಕ್ರಮ ಎಸಗಿದ್ದಾರೆ’ ಎಂಬ ಆರೋಪವಿದೆ. ಇದಕ್ಕೆ ಸಂಬಂಧಪಟ್ಟಂತೆ ಪೌಲ್‌ ಅವರನ್ನು ಬಂಧಿಸಿರುವ ಸಿಐಡಿ, ತನಿಖೆ ಮುಂದುವರಿಸಿದೆ.

‘ಅಕ್ರಮದಿಂದ ಬಂದಿದ್ದ ₹1.35ಕೋಟಿ ಹಣವನ್ನು ಡಿವೈಎಸ್ಪಿ ಶಾಂತಕುಮಾರ್, ಎಡಿಜಿಪಿ ಪೌಲ್‌ ಅವರಿಗೆ ಕೊಟ್ಟಿದ್ದರು. ಈ ಹಣ ಎಲ್ಲಿದೆ? ಎಂಬ ಬಗ್ಗೆ ಮಾಹಿತಿಕಲೆಹಾಕಲಾಗುತ್ತಿದೆ. ಪೌಲ್ ಅವರು ತಮ್ಮ ತಂದೆ ನೇತರಾಮ್ ಬನ್ಸಾಲ್, ಪತ್ನಿ, ಮಗಳ ಹಾಗೂ ಇತರರ ಹೆಸರಿನಲ್ಲಿ ಆಸ್ತಿ ಖರೀದಿ ಮಾಡಿರುವ ಮಾಹಿತಿ ಲಭ್ಯವಾಗಿದೆ. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಹಾಗೂಸುತ್ತಮುತ್ತ ಜಮೀನು ಇರುವುದು ಮೂಲಗಳಿಂದ ತಿಳಿದುಬಂದಿದೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ADVERTISEMENT

ಮುದ್ರಾಂಕಗಳ ಮಹಾಪರಿವೀಕ್ಷಕರಿಗೆ ಪತ್ರ: ಅಮ್ರಿತ್ ಪೌಲ್ ಹಾಗೂ ಅವರ ಸಂಬಂಧಿಕರ ಹೆಸರಿನಲ್ಲಿ ನೋಂದಣಿ ಆಗಿರುವ ಆಸ್ತಿಗಳ ಬಗ್ಗೆ ದಾಖಲೆಗಳನ್ನು ನೀಡುವಂತೆ ನೋಂದಣಿ ಮತ್ತು ಮುದ್ರಾಂಕಗಳ (ಐಜಿಆರ್)ಮಹಾಪರಿವೀಕ್ಷಕರಿಗೆ ಸಿಐಡಿ ಅಧಿಕಾರಿಗಳು ಪತ್ರ ಬರೆದಿದ್ದಾರೆ.

‘ದಾಖಲೆಗಳ ಆಸ್ತಿಗಳ ಪಟ್ಟಿ ಶೀಘ್ರವೇ ಕೈ ಸೇರಲಿದೆ. ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಸಿಐಡಿ ಮೂಲಗಳು ಹೇಳಿವೆ.

ಆಸ್ತಿ ಖರೀದಿಗೆ ನೆರವು: ಉದ್ಯಮಿಗಳಿಗೆ ನೋಟಿಸ್
‘ಎಡಿಜಿಪಿ ಅಮ್ರಿತ್ ಪೌಲ್ ಜೊತೆ ಒಡನಾಟ ಹೊಂದಿ, ಅವರಿಗೆ ಆಸ್ತಿ ಖರೀದಿಸಲು ನೆರವಾಗಿದ್ದ ಆರೋಪದಡಿ ಉದ್ಯಮಿಗಳಾದ ಶಂಭುಲಿಂಗಯ್ಯ ಸ್ವಾಮಿ ಹಾಗೂ ಹುಸ್ಕೂರು ಆನಂದ್ ಅವರನ್ನು ಈಗಾಗಲೇ ವಿಚಾರಣೆ ಮಾಡಲಾಗಿದೆ. ಆಸ್ತಿ ಕೊಡಿಸಿರುವುದಾಗಿ ಇವರಿಬ್ಬರು ಒಪ್ಪಿಕೊಂಡಿದ್ದಾರೆ. ದಾಖಲೆ ಹಾಜರುಪಡಿಸುವಂತೆ ಇವರಿಬ್ಬರಿಗೂ ನೋಟಿಸ್ ನೀಡಲಾಗಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ಕೃಷಿ ಉಪಕರಣ ಮಾರಾಟ ಕಂಪನಿ ನಡೆಸುತ್ತಿರುವ ಶಂಭುಲಿಂಗಯ್ಯ ಸ್ವಾಮಿ ಅವರ ಸಹಕಾರ ನಗರದಲ್ಲಿರುವ ಕಚೇರಿ ಹಾಗೂ ಜಕ್ಕೂರು ಕೆರೆ ಬಳಿಯ ಮನೆಯಲ್ಲಿ ಇತ್ತೀಚೆಗೆ ಶೋಧ ನಡೆಸಲಾಗಿತ್ತು. ಹಲವು ದಾಖಲೆಗಳನ್ನೂ ಜಪ್ತಿ ಮಾಡಲಾಗಿತ್ತು. ಇವುಗಳ ಪರಿಶೀಲನೆ ಪ್ರಗತಿಯಲ್ಲಿದೆ’ ಎಂದೂ ಹೇಳಿವೆ.

‘ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕಲ್ಪನಾ ಪತಿ ಹುಸ್ಕೂರು ಆನಂದ್‌ ಅವರ ಮನೆ ಹಾಗೂ ಕಚೇರಿ ಮೇಲೂ ದಾಳಿ ಮಾಡಲಾಗಿತ್ತು. ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲದ ಆನಂದ್, ಎಡಿಜಿಪಿ ಆಸ್ತಿ ಖರೀದಿಸಲು ನೆರವಾಗಿರುವುದಾಗಿ ಹೇಳಿಕೆ ನೀಡಿದ್ದಾರೆ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.