ADVERTISEMENT

ನೇಮಕಾತಿ ಅಕ್ರಮ ಪ್ರಕರಣ: ₹90 ಲಕ್ಷ ಕೊಡಿಸಿದ್ದ ‘ಮಧ್ಯವರ್ತಿ’ ಪಿಎಸ್‌ಐ!

ಪೊಲೀಸ್ ಠಾಣೆಯಲ್ಲೇ ಕೆ. ಹರೀಶ್ ಬಂಧನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 20:00 IST
Last Updated 15 ಜೂನ್ 2022, 20:00 IST
ಪಿಎಸ್‌ಐ ಕೆ.ಹರೀಶ್
ಪಿಎಸ್‌ಐ ಕೆ.ಹರೀಶ್   

ಬೆಂಗಳೂರು: ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್ಐ) ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ನಗರದ ಬ್ಯಾಡರಹಳ್ಳಿ ಠಾಣೆ ಪಿಎಸ್ಐ ಕೆ.ಹರೀಶ್ ಅವರನ್ನು ಬಂಧಿಸಿದ್ದಾರೆ.

‘ಮಾಗಡಿ ತಾಲ್ಲೂಕಿನ ಕೆ.ಹರೀಶ್ 2018ರಲ್ಲಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಇತ್ತೀಚೆಗೆ ನಡೆದ 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಇಬ್ಬರು ಅಭ್ಯರ್ಥಿಗಳು ಅಕ್ರಮವಾಗಿ ಆಯ್ಕೆಯಾಗುವಂತೆ ನೋಡಿಕೊಂಡಿದ್ದ. ಈ ಬಗ್ಗೆ ಪುರಾವೆಗಳನ್ನು ಸಂಗ್ರಹಿಸಿ ಮಂಗಳವಾರ ಈತನನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಬುಧವಾರ ಹಾಜರುಪಡಿಸಿ ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಪಿಎಸ್ಐ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಾದ ಆರ್.ಮಧು ಹಾಗೂ ದಿಲೀಪ್‌ಕುಮಾರ್ ಅಕ್ರಮ ಆಯ್ಕೆ ಬಯಸಿ ಕೆ.ಹರೀಶ್‌ ಅವರನ್ನು ಸಂಪರ್ಕಿಸಿದ್ದರು. ತನ್ನದೇ ಊರಿನವರಾಗಿದ್ದರಿಂದ ಇಬ್ಬರನ್ನೂ ಪಿಎಸ್‌ಐ ಮಾಡಲು ಹರೀಶ್ ಒಪ್ಪಿಕೊಂಡಿದ್ದ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚಾಗುವುದೆಂದು ತಿಳಿಸಿದ್ದ. ಅದಕ್ಕೆಲ್ಲ ಅಭ್ಯರ್ಥಿಗಳು ಒಪ್ಪಿಕೊಂಡಿದ್ದರು.’

ADVERTISEMENT

‘ಪೊಲೀಸ್ ನೇಮಕಾತಿ ವಿಭಾಗದ ನೌಕರರ ಜೊತೆ ಒಡನಾಟ ಹೊಂದಿದ್ದ ಮೈಸೂರಿನ ರಿಸರ್ವ್ ಇನ್‌ಸ್ಪೆಕ್ಟರ್ (ಆರ್‌ಪಿಐ) ಮಧುರನ್ನು ಸಂಪರ್ಕಿಸಿದ್ದ ಹರೀಶ್, ಇಬ್ಬರೂ ಅಭ್ಯರ್ಥಿಗಳಿಂದ ಒಟ್ಟು ₹ 90 ಲಕ್ಷ ಕೊಡಿಸಿದ್ದ. ಅದರಲ್ಲಿ ತಾನೂ ಕಮಿಷನ್ ಪಡೆದಿದ್ದ. ಇದಾದ ನಂತರವೇ ಕೆಲ ನೌಕರರು, ಅಭ್ಯರ್ಥಿಗಳ ಒಎಂಆರ್‌ ಪ್ರತಿಗಳನ್ನು ತಿದ್ದಿ ಹುದ್ದೆಗೆ ಅಕ್ರಮವಾಗಿ ಆಯ್ಕೆಯಾಗುವಂತೆ ಮಾಡಿದ್ದರು’ ಎಂದೂ ಸಿಐಡಿ ಮೂಲಗಳು ತಿಳಿಸಿವೆ.‌

ನೋಟಿಸ್ ನೀಡುತ್ತಿದ್ದಂತೆ ನಾಪತ್ತೆ: ‘ಅಭ್ಯರ್ಥಿಗಳಾದ ಮಧು, ದಿಲೀಪ್‌ಕುಮಾರ್ ಹಾಗೂ ಆರ್‌ಪಿಐ ಮಧು ಅವರನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಅವರ ವಿಚಾರಣೆ ವೇಳೆ ಕೆ.ಹರೀಶ್ ಹೆಸರು ಕೇಳಿಬಂದಿತ್ತು. ಹೀಗಾಗಿ, ಆತನಿಗೆ ನೋಟಿಸ್ ನೀಡಲಾಗಿತ್ತು. ಅದರ ಪ್ರತಿ ತಲುಪಿದ ಮರುದಿನದಿಂದಲೇ ಹರೀಶ್ ನಾಪತ್ತೆಯಾಗಿದ್ದ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಮೂರು ಬಾರಿ ಹರೀಶ್‌ಗೆ ನೋಟಿಸ್ ಕಳುಹಿಸಿದರೂ ವಿಚಾರಣೆಗೆ ಬಂದಿರಲಿಲ್ಲ. ನೋಟಿಸ್‌ ಪ್ರಶ್ನಿಸಿದ್ದ ಹರೀಶ್, ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದ. ವಿಚಾರಣೆ ನಡೆಸಿದ್ದ ಹೈಕೋರ್ಟ್, ಕಾನೂನಿನಡಿ ಕ್ರಮ ಕೈಗೊಳ್ಳುವಂತೆ ಹೇಳಿಇತ್ತೀಚೆಗೆ ಆದೇಶ ನೀಡಿತ್ತು. ಕರ್ತವ್ಯ ನಿರ್ವಹಿಸುತ್ತಿದ್ದ ಬ್ಯಾಡರಹಳ್ಳಿ ಠಾಣೆಯಲ್ಲೇ ಪಿಎಸ್‌ಐ ಕೆ.ಹರೀಶ್‌ನನ್ನು ಬಂಧಿಸಲಾಯಿತು’ ಎಂದೂ ತಿಳಿಸಿವೆ.

ಮೊದಲ ರ‍್ಯಾಂಕ್‌ ಪಡೆದಿದ್ದ ಕುಶಾಲ್ ಸಿಐಡಿ ಕಸ್ಟಡಿಗೆ

ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ಎಸಗಿದ್ದ ಆರೋಪದಡಿ ಬಂಧಿಸಲಾಗಿರುವ ಮೊದಲ ರ‍್ಯಾಂಕ್ ಅಭ್ಯರ್ಥಿ ಜೆ. ಕುಶಾಲ್‌ಕುಮಾರ್‌ನನ್ನು ವಿಚಾರಣೆಗಾಗಿ 10 ದಿನ ಸಿಐಡಿ ಕಸ್ಟಡಿಗೆ ಒಪ್ಪಿಸಲಾಗಿದೆ.

‘ಮಾಗಡಿ ತಾಲ್ಲೂಕಿನ ಜುಟ್ಟನಹಳ್ಳಿ ಗ್ರಾಮದ ಕುಶಾಲ್‌ಕುಮಾರ್ ಒಎಂಆರ್ ತಿದ್ದುಪಡಿ ಮಾಡಿಸಿ ಅಕ್ರಮವಾಗಿ ಹುದ್ದೆಗೆ ಆಯ್ಕೆಯಾಗಿದ್ದ. ಈತನ ವಿರುದ್ಧ ಹಲಸೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆತನನ್ನು ಬಂಧಿಸಿದ್ದ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಇದೀಗ, ಬಾಡಿ ವಾರೆಂಟ್ ಮೇಲೆ ಈತನನ್ನು ಕಸ್ಟಡಿಗೆ ಪಡೆಯಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.