ADVERTISEMENT

ಮಗು ಸಾವಿನ ಪ್ರಕರಣ:ಜೇವರ್ಗಿ ಪಿಎಸ್‌ಐ ಅಮಾನತು

ತಾಯಿಯೊಂದಿಗೆ ಜೈಲು ಸೇರಿದ್ದ ಮಗು ಸಾವು ಪ್ರಕರಣ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 20:03 IST
Last Updated 4 ಜನವರಿ 2021, 20:03 IST
ಕಲಬುರ್ಗಿಯಲ್ಲಿ ಶನಿವಾರ ಮಗುವಿನ ಮರಣೋತ್ತರ ಪರೀಕ್ಷೆ ನಡೆಸುವ ಸ್ಥಳಕ್ಕೆ ಬಂದ ಪೊಲೀಸ್‌ ಅಧಿಕಾರಿಗಳನ್ನು ಕೋಲಿ ಸಮಾಜ ಹಾಗೂ ಕಾಂಗ್ರೆಸ್‌ ಮುಖಂಡರು ತರಾಟೆ ತೆಗೆದುಕೊಂಡರು
ಕಲಬುರ್ಗಿಯಲ್ಲಿ ಶನಿವಾರ ಮಗುವಿನ ಮರಣೋತ್ತರ ಪರೀಕ್ಷೆ ನಡೆಸುವ ಸ್ಥಳಕ್ಕೆ ಬಂದ ಪೊಲೀಸ್‌ ಅಧಿಕಾರಿಗಳನ್ನು ಕೋಲಿ ಸಮಾಜ ಹಾಗೂ ಕಾಂಗ್ರೆಸ್‌ ಮುಖಂಡರು ತರಾಟೆ ತೆಗೆದುಕೊಂಡರು   

ಕಲಬುರ್ಗಿ: ಚುನಾವಣೆ ಸಂಬಂಧಿ ಘರ್ಷಣೆಗೆ ಸಂಬಂಧಿಸಿದಂತೆ ಜೇವರ್ಗಿ ತಾಲ್ಲೂಕಿನ ಜೈನಾಪುರದ ಎರಡೂ ಕಡೆಯವರು ದೂರು ನೀಡಿದ್ದರೂ ಒಂದು ಕಡೆಯವರನ್ನು ಮಾತ್ರ ಬಂಧಿಸಿದಆರೋಪದ ಮೇರೆಗೆ ಜೇವರ್ಗಿ ಠಾಣೆ ಪಿಎಸ್‌ಐ ಮಂಜುನಾಥ ಹೂಗಾರ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್ ಅಮಾನತು ಮಾಡಿದ್ದಾರೆ.

ಜೈನಾಪುರದ ರವಿ ತಳವಾರ, ಪತ್ನಿ ಸಂಗೀತಾ, ರವಿ ಸಹೋದರ ಸಂತೋಷ ಸೇರಿದಂತೆ 10 ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ರವಿ ಕುಟುಂಬದವರು ನೀಡಿದ ದೂರಿನನ್ವಯ ಕ್ರಮ ಕೈಗೊಂಡಿರಲಿಲ್ಲ. ಪ್ರಕರಣದ ಸಂಬಂಧ ರವಿ, ಸಂಗೀತಾ, ಸಂತೋಷ ಅವರನ್ನು ವಿಚಾರಣಾಧೀನ ಕೈದಿಯಾಗಿ ಕಾರಾಗೃಹಕ್ಕೆ ಕಳಿಸಲಾಗಿತ್ತು. ಸಂಗೀತಾ ಅವರು ತಮ್ಮ ಮೂರು ವರ್ಷದ ಮಗು ಭಾರತಿಯನ್ನೂ ಕಾರಾಗೃಹಕ್ಕೆ ಕರೆದೊಯ್ದಿದ್ದರು. ರಾತ್ರಿ ವೇಳೆ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಮಗು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿತ್ತು.

‘ಮಗುವಿನ ಸಾವಿಗೆ ಪಿಎಸ್‌ಐ ನೇರ ಹೊಣೆಯಾಗಿದ್ದು, ಅವರನ್ನು ಅಮಾನತುಗೊಳಿಸಬೇಕು’ ಎಂದು ಆರೋಪಿಸಿ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕೋಲಿ ಸಮಾಜದವರು ನಗರದ ಜಿಮ್ಸ್ ಆಸ್ಪತ್ರೆ ಎದುರಿನ ವೃತ್ತದಲ್ಲಿ ಭಾನುವಾರ ತಡರಾತ್ರಿವರೆಗೆ ಪ್ರತಿಭಟನೆ ನಡೆಸಿದ್ದರು.

ADVERTISEMENT

ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದ ಗೃಹಸಚಿವ ಬಸವರಾಜ ಬೊಮ್ಮಾಯಿ ತಪ್ಪಿತಸ್ಥ ಪಿಎಸ್ಐ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ನಂತರ ಪ್ರತಿಭಟನೆ ಅಂತ್ಯಗೊಳಿಸಿ ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಮಗುವಿನ ಅಂತ್ಯಸಂಸ್ಕಾರಕ್ಕೆ ತಂದೆ–ತಾಯಿಯನ್ನು ಜೈಲಿನಿಂದ ಕರೆದೊಯ್ದಿದ್ದ ಪೊಲೀಸರು, ಆ ನಂತರ ಅವರನ್ನು ಜೈಲಿಗೆ ಕಳಿಸಿಕೊಟ್ಟರು.

ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ: ‘ಆಕಸ್ಮಿಕವಾಗಿ ಮಗು ಸಾವಿಗೀಡಾದ ಘಟನೆಯನ್ನು ಬಿಜೆಪಿ ತಲೆಗೆ ಕಟ್ಟುವ ಯತ್ನವನ್ನು ಕಾಂಗ್ರೆಸ್ ಮುಖಂಡರು ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಬಿಜೆಪಿಕಾರ್ಯಕರ್ತರು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನೇತೃತ್ವದಲ್ಲಿ ಸೋಮವಾರ ಜೇವರ್ಗಿಯಲ್ಲಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.