ADVERTISEMENT

ಅನುದಾನಿತ ಪದವಿಪೂರ್ವ ಕಾಲೇಜು | ವಿದ್ಯಾರ್ಥಿಗಳ ಕೊರತೆ; ಹುದ್ದೆ ಭರ್ತಿಗೆ ತೊಡಕು

ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ 1.33 ಲಕ್ಷ ಸೀಟುಗಳು ಉಳಿಕೆ

ಚಂದ್ರಹಾಸ ಹಿರೇಮಳಲಿ
Published 2 ಜನವರಿ 2026, 0:10 IST
Last Updated 2 ಜನವರಿ 2026, 0:10 IST
<div class="paragraphs"><p> ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡ</p></div>

ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡ

   

ಬೆಂಗಳೂರು: ವಿದ್ಯಾರ್ಥಿಗಳ ದಾಖಲಾತಿ ಪ್ರತಿ ವರ್ಷವೂ ಗಣನೀಯವಾಗಿ ಕುಸಿಯುತ್ತಿರುವುದು ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ತೊಡಕಾಗಿದೆ.

ವಿವಿಧ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿ 813 ಅನುದಾನಿತ ಪದವಿಪೂರ್ವ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರ ನೀಡಿರುವ ಅನುಮತಿ ಪ್ರಕಾರ 2.25 ಲಕ್ಷ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಹುದಾಗಿದೆ. ಆದರೆ, ಪ್ರತಿ ವರ್ಷವೂ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕ್ಷೀಣಿಸುತ್ತಾ ಬಂದಿದ್ದು, 2025–26ನೇ ಸಾಲಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 91,957 ಮಾತ್ರ. ಅಂದರೆ ದಾಖಲಾತಿ ಅನುಮತಿಗಿಂತ ಪ್ರವೇಶದ ಪ್ರಮಾಣ ಶೇ 40ಕ್ಕೆ ಕುಸಿದಿದೆ. 1,33,243 ಸೀಟುಗಳು ಖಾಲಿ ಉಳಿದಿವೆ.

ADVERTISEMENT

ಪದವಿಪೂರ್ವ ಶಿಕ್ಷಣ ಇಲಾಖೆ 2022–23, 2023–24 ಹಾಗೂ 2024–25ನೇ ಸಾಲಿನಲ್ಲಿ ಸರ್ಕಾರ 393 ಖಾಸಗಿ ಪಿಯು ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಿದೆ. ಅನುಮತಿ ಪಡೆದ ಶೇ 99ರಷ್ಟು ಕಾಲೇಜುಗಳು ಆರಂಭವಾಗಿದ್ದು, ಖಾಸಗಿ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಅತ್ತ ಅನುದಾನಿತ ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಕುಸಿತವಾಗುತ್ತಿದ್ದು, ಈಗಾಗಲೇ ಏಳು ಕಾಲೇಜು
ಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ. 

ಉಪನ್ಯಾಸಕರಿಗೂ ಸಂಕಷ್ಟ: ಸರ್ಕಾರದ ನಿಯಮದಂತೆ ಅನುದಾನಿತ ಕಾಲೇಜುಗಳ ಕಾಯಂ ಉಪನ್ಯಾಸಕರಿಗೆ ಸರ್ಕಾರ ವೇತನ ನೀಡಬೇಕಾದರೆ, ಆಯಾ ವಿಷಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕನಿಷ್ಠ 40 ಇರಬೇಕು. ಬಹುತೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಕೆಲ ವಿಷಯಗಳಲ್ಲಿ ವಿದ್ಯಾರ್ಥಿಗಳೇ ಇಲ್ಲ. ಅಂತಹ ಕಾಲೇಜುಗಳಲ್ಲಿ ಅನುದಾನಿತ ವೇತನ ಪಡೆಯುತ್ತಿರುವ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ಮಂಜೂರಾದ 7,275 ಉಪನ್ಯಾಸಕರ ಹುದ್ದೆಗಳಲ್ಲಿ 4,291 ಹುದ್ದೆಗಳು ಖಾಲಿ ಇವೆ. 1995–96ನೇ ಶೈಕ್ಷಣಿಕ ಸಾಲಿನ ಪೂರ್ವದಲ್ಲಿ ಆರಂಭವಾಗಿ ವೇತನಾನುದಾನಕ್ಕೆ ಒಳಪಟ್ಟಿರುವ ಶಾಲಾ–ಕಾಲೇಜುಗಳಲ್ಲಿ ಜನವರಿ 2016ರಿಂದ ಡಿಸೆಂಬರ್‌ 2020ರವರೆಗಿನ ಅವಧಿಯಲ್ಲಿ ನಿವೃತ್ತಿ, ನಿಧನ, ರಾಜೀನಾಮೆ ಮತ್ತಿತರ ಕಾರಣಗಳಿಂದ ಖಾಲಿ ಇರುವ ಎಲ್ಲ ವಿಷಯಗಳ ಒಟ್ಟು 3,580 ಹುದ್ದೆ ಹಾಗೂ 1,520 ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಅನುಮೋದನೆ ನೀಡಿದೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆ ಕುಸಿದಿರುವುದು ಖಾಲಿ ಹುದ್ದೆಗಳ ಭರ್ತಿಗೆ ಅಡ್ಡಿಯಾಗಿದೆ.

ಖಾಸಗಿ ಕಾಲೇಜುಗಳಿಗೆ ಕಡಿವಾಣ ಹಾಕಲು ಒತ್ತಾಯ

‘ಸೇವೆಯ ಹೆಸರಿನಲ್ಲಿ ಶಿಕ್ಷಣವನ್ನು ವ್ಯಾಪಾರದ ಸರಕಾಗಿಸಿಕೊಂಡಿರುವ ಖಾಸಗಿ ಕಾಲೇಜುಗಳಿಗೆ ತಡೆ ಹಾಕಬೇಕು’ ಎಂದು ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ಅಧಿಕ ಶುಲ್ಕ ವಸೂಲಿ ಮಾಡುವ ಮೂಲಕ ಪೋಷಕರನ್ನು ಸಾಲದ ಸುಳಿಗೆ ತಳ್ಳುತ್ತಿರುವ, ವೈದ್ಯಕೀಯ–ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ತರಬೇತಿ ನೀಡುವ ನೆಪದಲ್ಲಿ ಅಧಿಕ ಅಂಕಗಳಿಕೆಗಾಗಿ ಒತ್ತಡ ಹಾಕುವ, ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ಲಾಭಕ್ಕಾಗಿ ಕೆಲಸ ಮಾಡುತ್ತಾ ಸಾಮಾಜಿಕ ಮತ್ತು ಶೈಕ್ಷಣಿಕ ಅಸಮಾನತೆಗೆ ಕಾರಣವಾಗಿರುವ ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡಬಾರದು’ ಎಂದು ಪತ್ರ ಬರೆದಿದ್ದಾರೆ. 

ಖಾಸಗಿ ಕಾಲೇಜುಗಳಿಗೆ ಸರ್ಕಾರ ಪ್ರತಿ ವರ್ಷವೂ ಅನುಮತಿ ನೀಡುತ್ತಿದೆ. ಇದು ಸರ್ಕಾರಿ, ಅನುದಾನಿತ ಕಾಲೇಜುಗಳ ಅವನತಿಗೆ ಕಾರಣವಾಗುತ್ತಿದೆ. ವಿಜ್ಞಾನ ಕಾಲೇಜುಗಳು ಬಾಗಿಲು ಮುಚ್ಚುತ್ತಿವೆ
ನಿಂಗೇಗೌಡ ಎ.ಎಚ್‌, ಅಧ್ಯಕ್ಷ, ಕರ್ನಾಟಕ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.