ADVERTISEMENT

ಅನುದಾನಿತ ಕಾಲೇಜುಗಳಲ್ಲಿ ‘ತ್ರಿಶಂಕು’ ಸ್ಥಿತಿ

ಹುದ್ದೆಗಳಿಗೆ ಇನ್ನೂ ಸಿಗದ ಸರ್ಕಾರದ ಅನುಮತಿ

ಎಂ.ಜಿ.ಬಾಲಕೃಷ್ಣ
Published 19 ಜನವರಿ 2020, 22:14 IST
Last Updated 19 ಜನವರಿ 2020, 22:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: 1985ರಲ್ಲಿ ಆರಂಭವಾದ ಬಹುತೇಕ ಖಾಸಗಿ ಪದವಿಪೂರ್ವ ಕಾಲೇಜುಗಳು 1995ರ ವೇಳಗೆ ಅನುದಾನಿತ ಕಾಲೇಜುಗಳಾಗಿ ಬದಲಾಗಿದ್ದರೂ, ಅಲ್ಲಿನ ನೂರಾರು ಉಪನ್ಯಾಸಕರಿಗೆ ಮಾತ್ರ ಅನುದಾನಿತ ಹುದ್ದೆಯ ಭಾಗ್ಯ ದೊರೆತಿಲ್ಲ.

ಆರಂಭದಲ್ಲಿ ಕೆಲವು ಹುದ್ದೆಗಳಿಗೆ ಮಾತ್ರ ಅನುದಾನ ಕರುಣಿಸಲಾಯಿತು. 2014ರಲ್ಲಿ ಇನ್ನೂ ಕೆಲವರಿಗೆ ಈ ಅವಕಾಶ ದೊರೆಯಿತು. ಆದರೆ ನೂರಾರು ಉಪನ್ಯಾಸಕರು ಇನ್ನೂ ಬಾಕಿ ಉಳಿದಿದ್ದು, ಈ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಕೆಲವರ ವಯೋಮಿತಿಯೂ ಮೀರಿಹೋಗಿದೆ. ಅನಗತ್ಯ ತಾಂತ್ರಿಕ ನೆಪಗಳನ್ನು ಹೇಳಿ ಅವರ ಭವಿಷ್ಯದೊಂದಿಗೆ ಚೆಲ್ಲಾಟ ಆಡಲಾಗುತ್ತಿದೆ ಎಂಬ ಆರೋಪ ಇದೆ.

‘ನಮ್ಮದು ಆರಂಭದಲ್ಲೇ ಖಾಲಿ ಇದ್ದ ಹುದ್ದೆ. ಅದಕ್ಕಾಗಿ ಚೆಕ್‌ಲಿಸ್ಟ್ ಕೊಡುವ ಅಗತ್ಯ ಇಲ್ಲ. ಆದರೆ ಇದೀಗ ಚೆಕ್‌ಲಿಸ್ಟ್‌ ಕೊಡಬೇಕು ಎಂದು ಕೇಳುತ್ತಿದ್ದಾರೆ. ಇದರಿಂದ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ನಮ್ಮ ಕೆಲಸಕ್ಕೆ ಸಂಚಕಾರ ನಿಶ್ಚಿತ. ಈ ಹಿಂದೆ ಉಪನ್ಯಾಸಕರನ್ನು ಯಾವ ರೀತಿ ನೇಮಕಾತಿ ಮಾಡಲಾಗಿತ್ತೋ, ಅದೇ ರೀತಿ ನಮ್ಮನ್ನೂ ಮಾಡಲಿ, ಈಗ ಅನಗತ್ಯ ತಾಂತ್ರಿಕ ಸಮಸ್ಯೆ ತಂದೊಡ್ಡುವುದು ಏಕಾಗಿ?’ ಎಂದು ನೊಂದ ಉಪನ್ಯಾಸಕರೊಬ್ಬರು ಅಳಲು ತೋಡಿಕೊಂಡರು.

ADVERTISEMENT

ಉಪನ್ಯಾಸಕರ ಕಾರ್ಯಭಾರದ ಭಾಗವಾಗಿಯೇ ಈ ತಕರಾರು ಎದುರಾಗಿದೆ. 1972ರ ವೇಳೆಗೆ ಒಂದು ಹುದ್ದೆಗೆ ಒಬ್ಬ ಉಪನ್ಯಾಸಕ ಎಂಬ ವ್ಯವಸ್ಥೆ ಇತ್ತು. ಬಳಿಕ ಒಂದು ತರಗತಿಯಲ್ಲಿ ಎರಡು ವಿಭಾಗಗಳಿದ್ದರೆ ಒಂದು ವಿಭಾಗಕ್ಕೆಮಾತ್ರ ಅನುದಾನ ಕೊಡಲಾಯಿತು. ಇಂದು ಕನಿಷ್ಠ 20 ಗಂಟೆಗಳ ಬೋಧನಾ ಅವಧಿ ಆಧಾರದಲ್ಲಿ ಉಪನ್ಯಾಸಕರ ಕಾರ್ಯಭಾರ ಪರಿಗಣಿಸಲಾಗುತ್ತಿದೆ.

ಆದರೆ ಕೆಲವು ಅಧಿಕಾರಿಗಳು ಸರ್ಕಾರದಿಂದ ದುಡ್ಡು ಹೊರಗೆ ಹೋಗಬಾರದು ಎಂಬ ಕಾರಣಕ್ಕೆ ಹೊಸ ಹೊಸ ನಿಯಮಗಳು, ಷರತ್ತುಗಳನ್ನು ರೂಪಿಸುತ್ತ ಬಂದಿದ್ದಾರೆ. ಇದೆಲ್ಲದರ ದುಷ್ಪರಿಣಾಮವನ್ನು ಅನುದಾನಿತ ಕಾಲೇಜುಗಳ ಉಪನ್ಯಾಸಕರು ಉಣ್ಣುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದರು.

30ರಂದು ಧರಣಿ:ಅನುದಾನಿತ ಹುದ್ದೆ ಸಮಸ್ಯೆ ಸಹಿತ ಹಲವಾರು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ, ದ್ವಿತೀಯ ಪಿಯುಸಿ ಮೌಲ್ಯಮಾಪನ ಬಹಿಷ್ಕಾರ ಸಂಬಂಧ ಎರಡನೇ ಹಂತದ ಸಾಂಕೇತಿಕ ಧರಣಿ ಇದೇ 30ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯಲಿದೆ ಎಂದರು.

‘ಅಧಿಕಾರಿಗಳೊಂದಿಗೆ ಚರ್ಚಿಸುವೆ‘
‘1995ರ ಬಳಿಕ ಯಾವ ಪದವಿಪೂರ್ವ ಕಾಲೇಜನ್ನೂ ಅನುದಾನಕ್ಕೊಳಪಡಿಸಿಲ್ಲ. ಶಿಕ್ಷಣ ಇಲಾಖೆ ಈಗಾಗಲೇ ಪ್ರಸ್ತಾವನೆಯನ್ನುಆರ್ಥಿಕ ಇಲಾಖೆಗೆ ಸಲ್ಲಿಸಿದೆ. ಉಪನ್ಯಾಸಕರಿಗೆಅನುದಾನಿತ ಹುದ್ದೆ ಕಲ್ಪಿಸುವ ವಿಚಾರದಲ್ಲಿ ಇರುವ ತಾಂತ್ರಿಕ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಸಚಿವ ಎಸ್‌.ಸುರೇಶ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಅತಂತ್ರಕ್ಕೆ ಕಾರಣ ಏನು?
ಅನುದಾನಕ್ಕೆ ಬಾಕಿ ಇರುವ ಉಪನ್ಯಾಸಕರ ವಿವರವನ್ನು ಸರ್ಕಾರ ಎರಡು ಬಾರಿ ಅಂದರೆ 2014 ಮತ್ತು 2015ರಲ್ಲಿ ಕೇಳಿತ್ತು. ಕೆಲವು ಕಾಲೇಜುಗಳ ಆಡಳಿತ ಮಂಡಳಿಗಳು ಮಾಹಿತಿ ನೀಡದಿರುವುದೇ ಈ ಸಮಸ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.

*
ಸರ್ಕಾರ ಗ್ರಾಂಟ್‌ ಇನ್ ಏಡ್‌ ಕಾರ್ಯ ಸೂಚಿ ಮಾಡಬೇಕು, ಒಬ್ಬೊಬ್ಬ ಅಧಿಕಾರಿ ಒಂದೊಂದು ನಿಯಮ ರೂಪಿಸಿ ಇಡೀ ವ್ಯವಸ್ಥೆಯೇ ಕುಲಗೆಟ್ಟು ಹೋಗಿದೆ.
-ತಿಮ್ಮಯ್ಯ ಪುರ್ಲೆ, ಅಧ್ಯಕ್ಷ, ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.