ಸತೀಶ ಜಾರಕಿಹೊಳಿ
ಬೆಳಗಾವಿ: ‘ಹಿಂದಿನ ಸರ್ಕಾರ ಲೋಕೋಪಯೋಗಿ ಇಲಾಖೆಯಲ್ಲಿ ₹12 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿದೆ. ನಾನು ಇಲಾಖೆಯ ಸಚಿವನಾದ ಮೇಲೆ ಒಂದೊಂದಾಗಿ ಬಗೆಹರಿಸುತ್ತಿದ್ದೇನೆ. ಅಭಿವೃದ್ಧಿ ಕಾಮಗಾರಿಗೂ ಹಣ ನೀಡಬೇಕಿದೆ. ಹೀಗಾಗಿ, ಕೆಲ ಬಿಲ್‌ಗಳು ಇನ್ನೂ ಬಾಕಿ ಉಳಿದಿವೆ’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಬುಧವಾರ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ಬಜೆಟ್ ಇಲ್ಲದೆಯೇ ಕಾಮಗಾರಿ ಮಾಡಿಸಿದೆ. ಗುತ್ತಿಗೆದಾರರು ಕೆಲಸ ಮುಗಿಸಿದ್ದಾರೆ. ಅದರ ಹಣ ನೀಡಬೇಕಿರುವುದು ಸರ್ಕಾರದ ಜವಾಬ್ದಾರಿ. ಅದಕ್ಕೆ ನಾವು ಹಿಂದಿನ ಬಿಲ್‌ಗಳನ್ನು ಪಾವತಿಸುತ್ತ, ಅಭಿವೃದ್ಧಿಗೂ ಆದ್ಯತೆ ನೀಡಬೇಕಿದೆ’ ಎಂದರು.
‘ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಮೇಲ್ಸೇತುವೆ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ. ಕಳೆದ ವರ್ಷ ಇದಕ್ಕೆ ಕೇಂದ್ರ ಸರ್ಕಾರದಿಂದ ಅನುದಾನ ಕೋರಲಾಯಿತು. ಅವರು ಸರಿಯಾಗಿ ಸ್ಪಂದಿಸಲಿಲ್ಲ. ಈ ವರ್ಷ ರಾಜ್ಯ ಸರ್ಕಾರದ ಅನುದಾನದಲ್ಲೇ ನಿರ್ಮಿಸಲು ನಿರ್ಧರಿಸಿದ್ದು, ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೂಮಿಪೂಜೆ ನೆರವೇರಿಸಲಿದ್ದಾರೆ’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ರಾಜ್ಯದಲ್ಲಿ ಶಿಲ್ಕು ಬಿದ್ದಿದ್ದ 42 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪೈಕಿ, ನಾನು ಬಂದ ಬಳಿಕ 27 ಕಾಮಗಾರಿಗಳನ್ನು ಮುಗಿಸಿದ್ದೇನೆ. ತಾಂತ್ರಿಕ ಸಮಸ್ಯೆ, ಭೂಸ್ವಾಧೀನ, ಅರಣ್ಯದ ಅನುಮತಿಯ ಕಾರಣ ಇನ್ನೂ 15 ಕಾಮಗಾರಿಗಳು ಬಾಕಿ ಉಳಿದಿವೆ’ ಎಂದರು. ಶಾಸಕ ಆಸಿಫ್ ಸೇಠ್ ಕೂಡ ಸಂವಾದದಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.