ADVERTISEMENT

ಪಿ.ಯು ಪರೀಕ್ಷೆ: ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ‘ಸರ್ಪಗಾವಲು’

ಪೊಲೀಸ್‌ ಮತ್ತು ಗುಪ್ತದಳದ ನೆರವು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 20:14 IST
Last Updated 18 ಫೆಬ್ರುವರಿ 2019, 20:14 IST
ಜಾಫರ್
ಜಾಫರ್   

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ನಿರ್ವಹಣಾ ವ್ಯವಸ್ಥೆಗೆ ಕನ್ನ ಹಾಕಿ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಲು ಸಾಧ್ಯವಾಗದ ‘ಅಭೇದ್ಯ’ ವ್ಯವಸ್ಥೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ರೂಪಿಸಿದೆ.

‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮ ವಾರ ನಡೆದ ಫೋನ್ ಇನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಪಿ.ಸಿ ಜಾಫರ್‌ ಈ ಕುರಿತ ವಿವರ ನೀಡಿದರು.

ಮಾರ್ಚ್‌ 1ರಿಂದ ಆರಂಭವಾಗುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಅಂತಿಮ ಹಂತದ ಸಿದ್ಧತೆಗಳು ನಡೆದಿವೆ. ಪರೀಕ್ಷಾ ನಿರ್ವಹಣೆಯಲ್ಲಿ ಯಾವುದೇ ಲೋಪ ಆಗದಿರಲು ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್‌ ಸಾಧನಗಳ ನೆರವು ಪಡೆಯಲಾಗಿದೆ. ಅಲ್ಲದೆ, ಸೋರಿಕೆ ಮಾಫಿಯಾದ ಮೇಲೆ ಕಣ್ಗಾವಲಿಡಲು ಸಿಸಿಬಿ, ಸಿಐಡಿ ನೆರವನ್ನೂ ಪಡೆಯ ಲಾಗಿದೆ ಎಂದು ಅವರು ವಿವರಿಸಿದರು.

ADVERTISEMENT

‘2016ರಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಯಿಂದ ಆದ ಅನಾಹುತ ಭವಿಷ್ಯದಲ್ಲಿ ಆಗದೇ ಇರಲು ಭಾರಿ ಕಟ್ಟುನಿಟ್ಟಿನ ವ್ಯವಸ್ಥೆಗಳನ್ನು ಮಾಡಿದ್ದೇವೆ. ಪ್ರಶ್ನೆ ಪತ್ರಿಕೆಗಳ ತಯಾರಿಕೆಯಿಂದ ವಿತರಿಸುವವರೆಗೆ ಹಲವು ಹಂತಗಳಿದ್ದು, ಪ್ರತಿಯೊಂದು ಹಂತದಲ್ಲೂ ಭದ್ರತೆ ಮತ್ತು ಗೋಪ್ಯತೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಪ್ರಶ್ನೆ ಪತ್ರಿಕೆ ತಯಾರಿಕೆ: ಅತ್ಯಂತ ಗೋಪ್ಯವಾಗಿ ನಡೆಸಲಾಗುತ್ತದೆ. ಪ್ರಶ್ನೆ ಪತ್ರಿಕೆಗಳನ್ನು ಯಾರು ತಯಾರಿ ಮಾಡುತ್ತಾರೆ ಎಂಬುದು ಇಲಾಖೆ ಒಂದಿಬ್ಬರಿಗೆ ಬಿಟ್ಟರೆ ಬೇರೆಯವರಿಗೆ ಗೊತ್ತಾಗುವುದಿಲ್ಲ. ಪ್ರಶ್ನೆ ಪತ್ರಿಕೆ ತಯಾರಿ ಮಾಡುವವರು ಯಾರು ಎಂಬುದು ನಿಶ್ಚಿತವಾದ ಬಳಿಕ ಅವರನ್ನು ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳಲಾಗುತ್ತದೆ. ಇಲಾಖೆ ನಿಗದಿ ಮಾಡಿದ ಸ್ಥಳಕ್ಕೆ ಒಯ್ದು, ಅಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸಲಾಗುತ್ತದೆ. ಈ ರೀತಿ ಹಲವು ತಂಡಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗುತ್ತದೆ.

ಖಜಾನೆಯಲ್ಲಿ ಸರ್ಪಗಾವಲು: ಪರೀಕ್ಷೆಗೆ ನೀಡಲೆಂದು ಆಯ್ಕೆ ಮಾಡಿದ ಪ್ರಶ್ನೆ ಪತ್ರಿಕೆಗಳ ಪ್ರತಿ ತೆಗೆದು ಖಜಾನೆಗಳಿಗೆ ಕಳಿಸಿಕೊಡಲಾಗುವುದು. ಖಜಾನೆಯಲ್ಲಿ ಸ್ಟ್ರಾಂಗ್‌ ರೂಂನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಭದ್ರವಾಗಿ ಇರಿಸಲಾಗುತ್ತದೆ. ಇದರ ಮೇಲೆ ವಿಶೇಷ ಕಣ್ಗಾವಲಿರುತ್ತದೆ. ಈ ಪ್ರಕ್ರಿಯೆಯಲ್ಲಿ ತೊಡಗುವ ಅಧಿಕಾರಿ ಗಳು ಅಥವಾ ಸಿಬ್ಬಂದಿ ಬಯೋಮೆಟ್ರಿಕ್‌ ಬಳಸಿದರಷ್ಟೇ ಕಾರ್ಯನಿರ್ವಹಿಸಲು ಸಾಧ್ಯ. ಮೊಬೈಲ್‌ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್‌ ಸಾಧನಗಳನ್ನು ಒಯ್ಯುವಂತಿಲ್ಲ. ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿರುತ್ತದೆ. ಅನಧಿಕೃತ ವ್ಯಕ್ತಿ ಪ್ರವೇಶವಾದರೆ, ಏನೇ ಚಟುವಟಿಕೆ ನಡೆದರೂ ಸೆನ್ಸರ್‌ ಮೂಲಕ ಎಚ್ಚರಿಕೆ ಸಂದೇಶ ತಲುಪುತ್ತದೆ.

ಎಸ್‌ಎಂಎಸ್‌ ಮೂಲಕ ಫಲಿತಾಂಶ
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಎಲ್ಲ ವಿದ್ಯಾರ್ಥಿಗಳ ಫಲಿತಾಂಶವನ್ನು ಅಂಕಗಳ ಸಮೇತ ಎಸ್‌ಎಂಎಸ್‌ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಲಾಗುವುದು ಎಂದು ಡಾ.ಜಾಫರ್‌ ತಿಳಿಸಿದರು.

ಪಿಯುಸಿಯಲ್ಲಿ ಈ ವ್ಯವಸ್ಥೆ ಇದೇ ವರ್ಷದಿಂದ ಜಾರಿಗೆ ಬರುತ್ತಿದೆ. ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಎಸ್‌ಎಂಎಸ್‌ ಮೂಲಕ ಫಲಿತಾಂಶ ತಲುಪಿಸಲಾಗಿತ್ತು ಎಂದರು.

ಸೋರಿಕೆ ಮಾಡಿದರೆ ಜೈಲಿಗೆ
ಈ ಬಾರಿ ಯಾವುದೇ ಕಾರಣಕ್ಕೂ ಸೋರಿಕೆ ಆಗುವುದಕ್ಕೆ ಸಾಧ್ಯವಿಲ್ಲ. ಇದಕ್ಕಾಗಿ ಗೃಹ ಇಲಾಖೆಯಿಂದ ಎಲ್ಲ ರೀತಿಯ ನೆರವು ಪಡೆಯಲಾಗಿದೆ. ಸೋರಿಕೆ ಮಾಡುವವರು ಮತ್ತು ಅದಕ್ಕೆ ಯಾವುದೇ ರೀತಿ ಸಹಕರಿಸಿದರೆ ಜೈಲಿಗೆ ಹಾಕಲಾಗುವುದು. ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಜಾಫರ್‌ ಖಡಕ್‌ ಎಚ್ಚರಿಕೆ ನೀಡಿದರು.

ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ವಾಟ್ಸ್‌ ಆ್ಯಪ್‌ ಅಥವಾ ಎಸ್‌ಎಂಎಸ್‌ ಮೂಲಕ ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ನಿಗಾ ಇಟ್ಟು ಅಂತಹವರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಅವರು ಹೇಳಿದರು.

**

ಪ್ರಾಮಾಣಿಕವಾಗಿ ಓದಿದ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳುವುದು ನಮ್ಮ ಪ್ರಥಮ ಆದ್ಯತೆ
- ಡಾ.ಪಿ.ಸಿ.ಜಾಫರ್‌, ನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ

**

ಮುಖ್ಯಾಂಶಗಳು
* ಪರೀಕ್ಷಾ ಉಸ್ತುವಾರಿಗೆ ಜಾಗೃತ ದಳದ ಕಣ್ಗಾವಲು

* ಪ್ರತಿ ಕೇಂದ್ರಕ್ಕೂ 3 ರಿಂದ 4 ಜನ ಇರುವ ಜಾಗೃತ ದಳ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.