
ಬೆಂಗಳೂರು: ‘ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರನ್ನು ನಿಂದಿಸುವುದು ಸಲ್ಲ’ ಎಂದು ಹೈಕೋರ್ಟ್, ‘ರಾಷ್ಟ್ರ ರಕ್ಷಣಾ ಪಡೆ’ ಮುಖಂಡ ಪುನೀತ್ ಕೆರೆಹಳ್ಳಿಗೆ ಎಚ್ಚರಿಸಿದೆ.
‘ನನ್ನ ವಿರುದ್ಧ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ಮತ್ತು ಈ ಸಂಬಂಧ 37ನೇ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿರುವ ವಿಚಾರಣೆ ರದ್ದುಪಡಿಸಬೇಕು’ ಎಂದು ಕೋರಿ ಪುನೀತ್ ಕೆರೆಹಳ್ಳಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರಾಜ್ಯ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ಬೆಂಗಳೂರಿನಲ್ಲಿನ ಅಕ್ರಮ ವಲಸಿಗರ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ವೈಯಕ್ತಿಕ ಹೋರಾಟಕ್ಕಿಳಿದಿದ್ದಾರೆ. ವಾಸ್ತವದಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಈ ವಿಚಾರದಲ್ಲಿ ಬೇರೊಂದು ಪ್ರಕರಣದಲ್ಲಿ ಜಾಮೀನಿಗೆ ಬಾಂಡ್ ಸಲ್ಲಿಸುವಂತೆ ಸಮನ್ವಯ ಪೀಠ ನೀಡಿರುವ ಆದೇಶವನ್ನು ಅರ್ಜಿದಾರರು ಪಾಲನೆ ಮಾಡಿಲ್ಲ. ನಿನ್ನೆಯಷ್ಟೇ ಅವರು ಸಾಮಾಜಿಕ ಜಾಲತಾಣದಲ್ಲಿ ಪೊಲೀಸರನ್ನು ನಿಂದಿಸಿದ್ದಾರೆ’ ಎಂದು ನ್ಯಾಯಪೀಠಕ್ಕೆ ಅರುಹಿದರು.
ಇದಕ್ಕೆ ನ್ಯಾಯಪೀಠ, ಪುನೀತ್ ಪರ ಹೈಕೋರ್ಟ್ ವಕೀಲ ಪಿ.ಎನ್.ಮನಮೋಹನ್ ಅವರನ್ನು ಉದ್ದೇಶಿಸಿ, ‘ನಿಮ್ಮ ಅರ್ಜಿದಾರರು ಮತ್ತೆ ಗಲಾಟೆ ಮಾಡಿದ್ದಾರಾ? ಅವರಿಗೆ ಸುಮ್ಮನಿರಲು ಆಗುವುದಿಲ್ಲವೇ? ಪ್ರಕರಣ ನ್ಯಾಯಾಂಗದ ಪರಿಶೀಲನೆಯಲ್ಲಿರುವಾಗ ಈ ರೀತಿ ವರ್ತಿಸಿದರೆ ಹೇಗೆ? ಯಾಕೆ ಹೀಗೆಲ್ಲಾ ಮಾಡುತ್ತಾರೆ? ಅವರ ವಿರುದ್ಧದ ಪ್ರಕರಣ ವಜಾ ಮಾಡಲಾಗಿಲ್ಲ, ತಡೆ ನೀಡಲಾಗಿದೆಯಷ್ಟೆ ಎಂಬುದು ನೆನಪಿನಲ್ಲಿರಲಿ’ ಎಂದು ಹೇಳಿತು.
ಚನ್ನಮ್ಮನ ಅಚ್ಚುಕಟ್ಟು ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದ ದೋಷಾರೋಪ ಪಟ್ಟಿಗೆ ತಡೆ ನೀಡಿದ ನ್ಯಾಯಪೀಠ, ‘ನ್ಯಾಯಾಂಗದ ಪರಿಶೀಲನೆಯಲ್ಲಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಬಾರದು’ ಎಂದು ಎಚ್ಚರಿಸಿ ವಿಚಾರಣೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.