ADVERTISEMENT

ನೀರಿನ ಘಟಕ ಅಳವಡಿಕೆಯಲ್ಲಿ ಅವ್ಯವಹಾರ: ತನಿಖೆಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 19:45 IST
Last Updated 22 ಜನವರಿ 2020, 19:45 IST
   

‌ಹಾಸನ: ರಾಜ್ಯದಲ್ಲಿ ಶುದ್ಧ ನೀರಿನ ಘಟಕಗಳ ಅಳವಡಿಕೆಯಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಖಾಸಗಿ ಏಜೆನ್ಸಿಯಿಂದ ತನಿಖೆ ನಡೆಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಹಲವು ಜಿಲ್ಲೆಗಳಲ್ಲಿ ನೀರಿನ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದರೂ ಈ ವರೆಗೂ ತನಿಖೆ ನಡೆಸಿಲ್ಲ. ಅರಸೀಕೆರೆ ತಾಲ್ಲೂಕಿನಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ದೂರು ನೀಡಿದ್ದಾರೆ. ಹಾಗಾಗಿ ಮೊದಲು ಅರಸೀಕೆರೆಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಂತರ ರಾಜ್ಯದ ಇತರ ಕಡೆ ಗಮನ ಹರಿಸಲಾಗುವುದು. ಸುಪ್ರೀಂ ಕೋರ್ಟ್‌ ಆದೇಶದಂತೆ ಹೊಸದಾಗಿ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರು ಮಾಡುವುದಿಲ್ಲ ಎಂದು ತಿಳಿಸಿದರು.

ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್‌ ಮಾತನಾಡಿ, ಫ್ಲೋರೈಡ್‌ ಅಂಶ ಹೆಚ್ಚು ಇರುವ ಕಡೆ ನೀರಿನ ಘಟಕಗಳ ಅಗತ್ಯವಿದೆ. ಆದರೆ ಅವಶ್ಯಕತೆ ಇಲ್ಲದಿರುವ ಕಡೆಯೂ ಘಟಕಗಳನ್ನು ಅಳವಡಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.