ADVERTISEMENT

ದೇಗುಲಗಳಲ್ಲಿ ಮುಕ್ತ ಪ್ರವೇಶದ ಫಲಕ ಹಾಕಿ -ಪ್ರಜಾವಾಣಿಯ ವರದಿ ಉಲ್ಲೇಖ

‘ಪ್ರಜಾವಾಣಿ’ಯ ವರದಿ, ಸಂಪಾದಕೀಯ, ಆಳ–ಅಗಲ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 21:45 IST
Last Updated 20 ಡಿಸೆಂಬರ್ 2022, 21:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳ ಪ್ರವೇಶ ದ್ವಾರದಲ್ಲಿ ಯಾವುದೇ ಜಾತಿ ಭೇದ ಇಲ್ಲದೇ ಎಲ್ಲ ಜಾತಿಯವರಿಗೆ ಮುಕ್ತ ಪ್ರವೇಶ ಇರುತ್ತದೆ ಎಂಬ ಫಲಕ ಹಾಕಬೇಕು, ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿದಾಗ ದಲಿತರ ಮನೆಗೆ ಹೋಗಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಕರ್ನಾಟಕ ವಿಧಾನಮಂಡಲದ ಪರಿಶಿಷ್ಟ ಜಾತಿ–ಪಂಗಡಗಳ ಕಲ್ಯಾಣ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಕಲ್ಯಾಣ ಸಮಿತಿಯ ಆರನೇ ವರದಿಯನ್ನು ಸಮಿತಿ ಅಧ್ಯಕ್ಷ ಎಂ.ಪಿ. ಕುಮಾರಸ್ವಾಮಿ ಅವರು ಮಂಗಳವಾರ ಸದನದಲ್ಲಿ ಮಂಡಿಸಿದರು.

ದಲಿತರ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ ಆಚರಣೆ, ನಕಲಿ ಪ್ರಮಾಣ ಪತ್ರದ ವಿವರಗಳನ್ನು ಉಲ್ಲೇಖಿ
ಸಲಾಗಿದೆ.

ADVERTISEMENT

ವರದಿಯ ಉದ್ದಕ್ಕೂ ‘ಪ್ರಜಾವಾಣಿ’ಯ ಸಂಪಾದಕೀಯ, ಆಳ–ಅಗಲದ ವಿಶ್ಲೇಷಣೆ, ವರದಿ, ವಿಶೇಷ ವರದಿಗಳ ನಕಲು ಪ್ರತಿಯನ್ನು ಲಗತ್ತಿಸಲಾಗಿದೆ. ಹತ್ತಕ್ಕೂ ಹೆಚ್ಚು ಬಾರಿ, ಪ್ರಜಾವಾಣಿಯ ವರದಿಯನ್ನು ಉಲ್ಲೇಖಿಸಿ ವಿವರಿಸಲಾಗಿದೆ.

ಶಿಫಾರಸುಗಳು

*ಅತಿಸೂಕ್ಷ್ಮ ಪ್ರದೇಶದ ಗ್ರಾಮಗಳಿಗೆ ಪೊಲೀಸರು ಆಗಾಗ್ಗೆ ಭೇಟಿ ಕೊಟ್ಟು ಗ್ರಾಮದ ಜನರಲ್ಲಿ ವಿಶ್ವಾಸ ಮೂಡಿಸಬೇಕು. ಪೊಲೀಸ್ ಗಸ್ತು ಹೆಚ್ಚಿಸಬೇಕು.

*ಉಳ್ಳೇರಹಳ್ಳಿಯಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯವು ಎರಡು ವಾರಗಳ ಬಳಿಕ ಹೊರಜಗತ್ತಿಗೆ ಗೊತ್ತಾಗಿದೆ. ಅಧಿಕಾರಿಗಳ ವೈಫಲ್ಯ, ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿದ್ದು, ಈ ಬಗ್ಗೆ ತನಿಖೆ ನಡೆಸಬೇಕು.

*ಪರಿಶಿಷ್ಟ ಜಾತಿ–ಪಂಗಡದವರ ಮೇಲೆ ಅಸ್ಪೃಶ್ಯತೆ ಆಚರಣೆ, ದೌರ್ಜನ್ಯ ಪ್ರಕರಣ ಪ್ರತಿದಿನ ವರದಿಯಾಗುತ್ತಿರುವುದು ಕಳವಳಕಾರಿ. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕ್ರಮವಹಿಸಬೇಕು.

*ಅರ್ಜಿದಾರರ ನೈಜತೆಯನ್ನು ಪರಿಶೀಲಿಸದೇ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡಲು ಶಿಫಾರಸು ಮಾಡಿದ ಅಧಿಕಾರಿ/ನೌಕರರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು.

*ಪರಿಶಿಷ್ಟ ಜಾತಿ–ಪಂ‌ಗಡದವರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆ ಪ್ರಮಾಣ ಕನಿಷ್ಠ ಹಾಗೂ ಶೂನ್ಯ ಮಟ್ಟಕ್ಕೆ ಇಳಿದಿದೆ.
ದೌರ್ಜನ್ಯ ಪ್ರಕರಣ ಹೆಚ್ಚಿರುವ ಜಿಲ್ಲೆಗಳಿಗೆ ಸಮಾಜ ಕಲ್ಯಾಣ, ಗೃಹ ಹಾಗೂ ನಾಗರಿಕ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡವನ್ನು ಕಳುಹಿಸಿ ಅಧ್ಯಯನ ನಡೆಸಬೇಕು.

‘ಏಕರೂಪದ ಶಿಷ್ಯವೇತನ ನಿಗದಿ ಮಾಡಿ’

ಎಲ್ಲ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಏಕರೂಪದ ಶಿಷ್ಯವೇತನ ನೀಡುವ ಪದ್ಧತಿ ಜಾರಿಗೆ ತರಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಎಂಫಿಎಲ್‌ ವಿದ್ಯಾರ್ಥಿಗಳಿಗೆ ₹20 ಸಾವಿರ, ಪಿಎಚ್‌ಡಿ ವಿದ್ಯಾರ್ಥಿಗಳಿಗೆ ₹35 ಸಾವಿರ ನೀಡಬೇಕು. ಐಐಟಿ, ಐಐಎಂ, ಐಐಎಸ್‌ಸಿಯಂತ ರಾಷ್ಟ್ರಮಟ್ಟದ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆದವರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ₹2 ಲಕ್ಷದಿಂದ ₹4 ಲಕ್ಷಕ್ಕೆ ಹೆಚ್ಚಿಸಬೇಕು ಎಂದೂ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.