ವಿಧಾನಸೌಧ
ಬೆಂಗಳೂರು: ‘ಕಾಂಗ್ರೆಸ್‌ನ ಪುಟ್ಟಣ್ಣ ಅಸಂಸದೀಯ ಪದ ಬಳಸಿದರು. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿ ನಡೆಸಿದ್ದದಿಂದ ಕಲಾಪವನ್ನು ಎರಡು ಬಾರಿ ಮುಂದೂಡಬೇಕಾಯಿತು. ಪುಟ್ಟಣ್ಣ ಅವರು ಮಧ್ಯಾಹ್ನ ವಿಷಾದ ವ್ಯಕ್ತಪಡಿಸಿದ ನಂತರವೇ ಕಲಾಪ ನಡೆಯಿತು.
ಪರಿಷತ್ತಿನಲ್ಲಿ ಬೆಳಿಗ್ಗೆ ಕಾಂಗ್ರೆಸ್‌ನ ಸುಧಾಮ ದಾಸ್ ಅವರು ಬಜೆಟ್ ಮೇಲೆ ಮಾತನಾಡುವಾಗ, ‘ಬಿಜೆಪಿ ಸಂವಿಧಾನ ವಿರೋಧಿ’ ಎಂದರು. ಇದಕ್ಕೆ ಬಿಜೆಪಿಯ ಹೇಮಲತಾ ನಾಯಕ್ ಆಕ್ಷೇಪ ವ್ಯಕ್ತಪಡಿಸಿದರು. ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪರಸ್ಪರರ ವಿರುದ್ಧ ಘೋಷಣೆ ಕೂಗಿದರು.
ಸುಧಾಮ ಅವರ ಬೆಂಬಲಕ್ಕೆ ಬಂದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು. ‘ಅಂಬೇಡ್ಕರ್ ಅವರನ್ನು ಸೋಲಿಸಿದ ನೀವು ಸಂವಿಧಾನ ವಿರೋಧಿ’ ಎಂದರು. ವಾಗ್ವಾದ ಬೆಳೆದು 18 ನಿಮಿಷಗಳವರೆಗೆ ಗದ್ದಲ ಮುಂದುವರೆಯಿತು.
ನಂತರ ಸುಧಾಮ ಅವರು ಮಾತು ಆರಂಭಿಸಿದರೂ ನಾರಾಯಣಸ್ವಾಮಿ ಮಾತನಾಡುತ್ತಿದ್ದರು. ಪುಟ್ಟಣ್ಣ ಸಹ ಅವರನ್ನು ಉದ್ದೇಶಿಸಿ ಕೂಗಿದರು. ತಕ್ಷಣವೇ ನಾರಾಯಣಸ್ವಾಮಿ, ಪುಟ್ಟಣ್ಣ ಅವಾಚ್ಯ ಶಬ್ಧ ಬಳಸಿದ್ದಾರೆ ಎಂದು ಹೇಳಿದರು. ಆಗ, ಪುಟ್ಟಣ್ಣ ವಿರುದ್ಧ ಬಿಜೆಪಿ ಸದಸ್ಯರು ಮುಗಿಬಿದ್ದರು.
ಕಲಾಪದ ವರದಿಯನ್ನು ತರಿಸಿಕೊಂಡ ಸಭಾಪತಿ ಬಸವರಾಜ ಹೊರಟ್ಟಿ , ‘ಪುಟ್ಟಣ್ಣ ಅಸಂಸದೀಯ ಪದ ಬಳಸಿದ್ದಾರೆ. ಅದು ಸಮಂಜಸವಲ್ಲ. ಕಡತದಿಂದ ತೆಗೆದುಹಾಕಿ’ ಎಂದರು. ವಿರೋಧ ಪಕ್ಷಗಳ ಸದಸ್ಯರು ಪುಟ್ಟಣ್ಣ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಗದ್ದಲ ಹೆಚ್ಚಾದ ಕಾರಣ ಸಭಾಪತಿಯು ಕಲಾಪವನ್ನು 45 ನಿಮಿಷ ಮುಂದೂಡಿದರು.
ಈ ಮಧ್ಯೆ ಕಾರ್ಯದರ್ಶಿ ಮಹಾಲಕ್ಷ್ಮೀ ಅವರ ಬಳಿ ಬಂದ ಪುಟ್ಟಣ್ಣ, ‘ನಾನು ಹೇಳಿಲ್ಲದಿದ್ದರೂ ಹೇಳಿದ್ದೇನೆ ಎಂದು ಬರೆದುಕೊಟ್ಟಿದ್ದೀರಿ. ಇದು ಸರಿಯಲ್ಲ’ ಎಂದು ಕೂಗಿದರು. ಮತ್ತೆ ಕಲಾಪ ಆರಂಭವಾದಾಗ ವಿರೋಧ ಪಕ್ಷಗಳ ಸದಸ್ಯರು ಸಭಾಪತಿಯ ಪೀಠದ ಎದುರು ಬಂದು ಧರಣಿ ನಡೆಸಿದರು. ‘ಪುಟ್ಟಣ್ಣ ಅವರನ್ನು ಹೊರಹಾಕಿ’ ಎಂದು ಪಟ್ಟು ಹಿಡಿದರು. ಗದ್ದಲ ನಿಲ್ಲದ ಕಾರಣ ಸಭಾಪತಿಯು ಮತ್ತೆ ಕಲಾಪ ಮುಂದೂಡಿದರು.
ಮಧ್ಯಾಹ್ನ ಕಲಾಪ ಆರಂಭವಾದಾಗಲೂ ಧರಣಿ ಮುಂದುವರೆಯಿತು. ಆಗ ಪುಟ್ಟಣ್ಣ, ‘ವಿಡಿಯೊ ನೋಡಿ ಪರಿಶೀಲಿಸಿ. ನೀವು ತೆಗೆದುಕೊಳ್ಳುವ ಕ್ರಮಕ್ಕೆ ನಾನು ಬದ್ಧ’ ಎಂದರು. ಅದನ್ನು ನಿರಾಕರಿಸಿದ ಸಭಾಪತಿ, ‘ಕಡತದಿಂದ ತೆಗೆದುಹಾಕಲು ಹೇಳಿದ್ದೇನೆ ಎಂದ ಮೇಲೆ ನೀನು ಆ ಮಾತು ಆಡಿದ್ದಿ ಎಂದರ್ಥ’ ಎಂದರು.
ಪುಟ್ಟಣ್ಣ, ‘ನಾನು ಆ ಮಾತು ಹೇಳಿಲ್ಲ. ಆದರೂ ವಿಷಾದಿಸುತ್ತೇನೆ’ ಎಂದರು. ವಿರೋಧ ಪಕ್ಷಗಳ ಸದಸ್ಯರು ಧರಣಿ ವಾಪಸ್ ಪಡೆದರು.
ಕಲಾಪ ಮುಂದೂಡಿದ ನಂತರ ಪತ್ರಕರ್ತರ ಗ್ಯಾಲರಿ ಬಳಿ ಬಿಜೆಪಿಯ ಭಾರತಿ ಶೆಟ್ಟಿ, ಜೆಡಿಎಸ್‌ನ ಎಸ್.ಎಲ್.ಬೋಜೇಗೌಡ, ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ಮಾತುಕತೆಯಲ್ಲಿ ತೊಡಗಿದ್ದರು.
ಹರಿಪ್ರಸಾದ್, ‘ಕಡತಕ್ಕೆ ಹೋಗುವುದಿಲ್ಲ ಎಂದು ಹೇಳಿದ ನಂತರ ಆಡಿದ ಮಾತುಗಳು ಕಡತದಲ್ಲಿ ಹೇಗೆ ಬಂದವು’ ಎಂದರು. ಬೋಜೇಗೌಡ,
‘ಅವರು ಪದೇ ಪದೇ ಇಂತಹ ಮಾತುಗಳನ್ನಾಡುತ್ತಿದ್ದಾರೆ’ ಎಂದು ಅಸಮಾಧಾನ
ವ್ಯಕ್ತಪಡಿಸಿದರು.
ಪತ್ರಕರ್ತರತ್ತ ತಿರುಗಿದ ಭಾರತಿ ಶೆಟ್ಟಿ ಅವರು, ‘ಅವರ ಮಾತು ನಿಮಗೆ ಕೇಳಿಸಿತಾ’ ಎಂದು ಪ್ರಶ್ನಿಸಿದರು. ನಂತರ ಹರಿಪ್ರಸಾದ್ ಅವರನ್ನು ಉದ್ದೇಶಿಸಿ, ‘ನನಗಂತೂ ಕೇಳಿಸಿತು. ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ್ದನ್ನು ಒಪ್ಪಲಾಗದು. ಅದೇ ರೀತಿ ಸಿ.ಟಿ.ರವಿ (ಬೆಳಗಾವಿ ಅಧಿವೇಶನದಲ್ಲಿ) ಆಡಿದ್ದ ಮಾತೂ ಸರಿಯಲ್ಲ. ಅದನ್ನೂ ಒಪ್ಪಲಾಗದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.