ADVERTISEMENT

ಬೆಳಗಾವಿ: ವಿಮಾನದಲ್ಲಿ ಬಂದವರಿಗೆ ಕ್ವಾರಂಟೈನ್

2 ವಿಮಾನಗಳ ಹಾರಾಟ, 3 ರದ್ದು

​ಪ್ರಜಾವಾಣಿ ವಾರ್ತೆ
Published 26 ಮೇ 2020, 0:52 IST
Last Updated 26 ಮೇ 2020, 0:52 IST
ಬೆಂಗಳೂರಿನಿಂದ ಬೆಳಗಾವಿಯ ಸಾಂಬ್ರಾಗೆ ಬಂದಿಳಿದ ಪ್ರಯಾಣಿಕರು
ಬೆಂಗಳೂರಿನಿಂದ ಬೆಳಗಾವಿಯ ಸಾಂಬ್ರಾಗೆ ಬಂದಿಳಿದ ಪ್ರಯಾಣಿಕರು   

ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಿಂದ ಎರಡು ತಿಂಗಳ ಬಳಿಕ ಸೋಮವಾರದಿಂದ ನಾಗರಿಕ ವಿಮಾನಗಳ ಹಾರಾಟ ಪುನರಾರಂಭವಾಯಿತು.

ಮೊದಲ ದಿನ ಬೆಂಗಳೂರು ಹಾಗೂ ಹೈದರಾಬಾದ್‌ ಮಾರ್ಗದ ವಿಮಾನಗಳು ಕಾರ್ಯಾಚರಣೆ ನಡೆಸಿದವು. ಬೆಂಗಳೂರಿನಿಂದ ಬಂದ ವಿಮಾನದಲ್ಲಿ (ಸ್ಟಾರ್‌ ಏರ್) 7 ಮಂದಿ ಪ್ರಯಾಣಿಕರು ಬಂದಿಳಿದರು. ಅಹಮದಾಬಾದ್‌ಗೆ 8 ಮಂದಿ ಪ್ರಯಾಣಿಸಿದರು. ಅಹಮದಾಬಾದ್‌ನಿಂದ 19 ಪ್ರಯಾಣಿಕರು ಬಂದರು.

ಹೈದರಾಬಾದ್‌ನಿಂದ (ಸ್ಪೈಸ್ ಜೆಟ್) 16 ಮಂದಿ ಬಂದರು, ಇಲ್ಲಿಂದ 21 ಮಂದಿ ತೆರಳಿದರು. ಪ್ರಯಾಣಿಕರನ್ನು ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಯಿತು.

ADVERTISEMENT

ಪ್ರಯಾಣಿಕರಿಂದ ಪ್ರತಿಕ್ರಿಯೆ ಬಾರದಿರುವುದು ಮತ್ತು ತಾಂತ್ರಿಕ ಕಾರಣಗಳಿಂದಾಗಿ ಮುಂಬೈ, ಪುಣೆ ಹಾಗೂ ಮೈಸೂರಿಗೆ ವಿಮಾನಗಳ ಹಾರಾಟ ರದ್ದುಪಡಿಸಲಾಯಿತು ಎಂದು ಮೂಲಗಳು ತಿಳಿಸಿವೆ.

‘ಪ್ರಯಾಣಿಕರು ಅಂತರ ಕಾಯ್ದುಕೊಳ್ಳಲು ಅಗತ್ಯವಾದ ವ್ಯವಸ್ಥೆಯನ್ನು ನಿಲ್ದಾಣದಲ್ಲಿ ಮಾಡಿಕೊಳ್ಳಲಾಗಿದೆ. ಹಂತ ಹಂತವಾಗಿ ಇಲ್ಲಿಂದ ವಿವಿಧ ನಗರಗಳಿಗೆ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ’ ಎಂದು ನಿಲ್ದಾಣದ ನಿರ್ದೇಶಕ ರಾಜೇಶ್‌ಕುಮಾರ್ ಮೌರ್ಯ ತಿಳಿಸಿದರು.

‘ಅಂತರ ಜಿಲ್ಲೆಗಳಿಂದ ವಿಮಾನಗಳಲ್ಲಿ ಬಂದವರನ್ನು ಕ್ವಾರಂಟೈನ್ ಮಾಡುವುದಿಲ್ಲ. ಅಂತರ ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್ ಮಾಡುವಂತೆ ಮಾರ್ಗಸೂಚಿ ಇದೆ. ದೆಹಲಿ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳಿಂದ ಬರುವವರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು. ಅದರಂತೆ ಅಹಮದಾಬಾದ್‌ನಿಂದ ಬಂದ 19 ಮಂದಿಗೆ ಕ್ವಾರಂಟೈನ್ ಸೀಲ್ ಹಾಕಲಾಗಿದೆ. ಬೆಳಗಾವಿಗೆ ಸಂಬಂಧಿಸಿದ 8 ಮಂದಿಯನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಉಳಿದವರಿಗೆ ಸೀಲ್ ಹಾಕಿ ಆಯಾ ಜಿಲ್ಲೆಗಳಲ್ಲಿನ ಸಂಬಂಧಿಸಿದ ನೋಡಲ್‌ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅಲ್ಲಿ ಕ್ವಾರಂಟೈನ್ ಮಾಡಿದ ಬಗ್ಗೆ ಮಾಹಿತಿ ಪಡೆಯಲಾಗುವುದು. ದೇಶದ ಇತರ ನಗರಗಳಿಂದ ಬರುವವರಿಗೆ ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗುವುದು’ ಎಂದು ನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್‌ ‘‍ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.