ADVERTISEMENT

ಬರ ಪರಿಹಾರ: ಸುಪ್ರೀಂಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿಲ್ಲ; ಆರ್‌. ಅಶೋಕ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 8:07 IST
Last Updated 23 ಏಪ್ರಿಲ್ 2024, 8:07 IST
<div class="paragraphs"><p>ಆರ್.ಅಶೋಕ ಪೋಸ್ಟರ್ ಬಿಡುಗಡೆ ಮಾಡಿದರು👆</p></div>

ಆರ್.ಅಶೋಕ ಪೋಸ್ಟರ್ ಬಿಡುಗಡೆ ಮಾಡಿದರು👆

   

ಬೆಂಗಳೂರು: ಬರ ಪರಿಹಾರ ಬಿಡುಗಡೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಯಾವುದೇ ನಿರ್ದೇಶನ ನೀಡಿಲ್ಲ. ಕೇಂದ್ರ ಸರ್ಕಾರವೇ ಚುನಾವಣಾ ಆಯೋಗದ ಅನುಮತಿ ಕೇಳಿದ್ದು, ಅದಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿದೆ. ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದನ್ನೇ ಕಾಂಗ್ರೆಸ್‌ ಪಕ್ಷ ತಮಗೆ ಸಿಕ್ಕ ವಿಜಯ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ ಎಂದು ಕುಟುಕಿದರು.

ADVERTISEMENT

ರಾಜ್ಯದಲ್ಲಿ ಹಿಂದೂಗಳ ಮೇಲೆ ಹಲ್ಲೆ, ದೌರ್ಜನ್ಯ ಮತ್ತು ಹತ್ಯೆಯಂತಹ ಘಟನೆಗಳಿಂದ ಜನತೆ ರೊಚ್ಚಿಗೆದ್ದಿದ್ದು, ಅವರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್‌ನವರು ವಿಧಾನಸೌಧದ ಆವರಣದಲ್ಲಿ ಬರ ಪರಿಹಾರದ ವಿಚಾರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದರು.

ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿಲ್ಲ, ನಿರ್ದೇಶನವನ್ನೂ ನೀಡಿಲ್ಲ. ಆದರೆ ಕಾಂಗ್ರೆಸ್‌ ಪಕ್ಷ ಮಾತ್ರ ಸಂಭ್ರಮ ಆಚರಿಸುತ್ತಿದೆ. ಚುನಾವಣಾ ಆಯೋಗದ ತಡೆ ಇದ್ದ ಕಾರಣಕ್ಕೆ ಕೇಂದ್ರ ಪರಿಹಾರ ಬಿಡುಗಡೆ ಮಾಡಿರಲಿಲ್ಲ, ಸುಪ್ರೀಂಕೋರ್ಟ್‌ನಲ್ಲಿಈ ವಿಚಾರ ಬಂದಾಗ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಅನುಮತಿ ಕೇಳುತ್ತೇವೆ ಎಂದು ಹೇಳಿತ್ತು. ಆ ಬಳಿಕ ಅನುಮತಿ ಕೇಳಿತ್ತು. ಆಯೋಗ ಅನುಮತಿ ನೀಡಿದೆ. ಅದನ್ನು ಸುಪ್ರೀಂಕೋರ್ಟ್‌ನಲ್ಲಿ ಕೇಂದ್ರ ತಿಳಿಸಿದೆ. ಇದರಲ್ಲಿ ಕಾಂಗ್ರೆಸ್ನದು ಒಂದು ಕಾಳಿನಷ್ಟೂ  ಪ್ರಯತ್ನವೂ ಇಲ್ಲ ಎಂದರು.

ಕೇಂದ್ರ ಸರ್ಕಾರ ಎಸ್‌ಡಿಆರ್‌ಎಫ್‌ ಅಡಿ ಈಗಾಗಲೇ ₹700 ಕೋಟಿ ಕೊಟ್ಟಿದೆ. ಆ ಹಣದಲ್ಲೇ ₹2,000 ಪರಿಹಾರ ನೀಡುತ್ತಿದೆ. ಆದರೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣದ ಬಗ್ಗೆ ಯಾವುದೇ ಪ್ರಸ್ತಾಪ ಮಾಡುತ್ತಿಲ್ಲ? ಈ ₹700 ಕೋಟಿಯಲ್ಲಿ ಶೇ 25 ರಷ್ಟು ಹಣವನ್ನು ರಾಜ್ಯ ಸರ್ಕಾರ ನೀಡಬೇಕು ಎಂದರು.

ಸಾಮಾನ್ಯವಾಗಿ ಬರಕ್ಕೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳಿಂದ ಹಣ ಬಂದ ಬಳಿಕವೇ ಪರಿಹಾರವನ್ನು ಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಹಿಂದಿನಿಂದಲೂ ಇದೇ ಪರಂಪರೆ ನಡೆದುಕೊಂಡು ಬಂದಿದೆ. ಆದರೆ, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿಗಳನ್ನು ಜಾರಿ ತಂದಿತು. ಅದಕ್ಕೆ ಯಾವುದೇ ತಯಾರಿ ಮಾಡಿಕೊಂಡಿರಲಿಲ್ಲ. ಇದರಿಂದಾಗಿ ಸರ್ಕಾರದ ಖಜಾನೆ ಖಾಲಿ ಆಗಿದೆ. ಯಾವುದೇ ಗ್ಯಾರಂಟಿ ಜನರಿಗೆ ತಲುಪಿಲ್ಲ. ಆದ್ದರಿಂದ ರೊಚ್ಚಿಗೆದ್ದಿದ್ದಾರೆ. ಹೀಗಾಗಿ ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಿರಂತರ ಮಾಡುತ್ತಲೇ ಬಂದಿದೆ ಎಂದು ಅಶೋಕ ದೂರಿದರು.

ಯಾವುದೇ ಅಭಿವೃದ್ಧಿಗೂ ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ, ಗ್ಯಾರಂಟಿಗಳಲ್ಲಿ ಎಲ್ಲರಿಗೂ ಅದರ ಪ್ರಯೋಜನ ಸಿಗುತ್ತಿಲ್ಲ, ತೆರಿಗೆ ಸಂಗ್ರಹಣೆ ಕಡಿಮೆ ಆಗಿದೆ. ಜನ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಹಾಲಿನ ಸಬ್ಸಿಡಿ ₹700 ಕೋಟಿಯನ್ನು ರೈತರಿಗೆ ಕೊಟ್ಟಿಲ್ಲ . ಚುನಾವಣೆ ಮುಗಿದ ಬಳಿಕ ನೌಕರರಿಗೆ ಸಂಬಳ ಪಾವತಿ ಮಾಡಲು ಹಣವಿಲ್ಲ, ನೌಕರರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ದೂರಿದರು.

ಇದೀಗ ಕಾನೂನು ಬಾಹಿರವಾಗಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದ್ದಾರೆ. ಇವರಿಗೆ ಅನುಮತಿ ಕೊಟ್ಟವರು ಯಾರು? ಇದು ಚುನಾವಣಾ ಆಯೋಗದ ನೀತಿ ಸಂಹಿತೆ ಉಲ್ಲಂಘನೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ ಎಂದು ಅಶೋಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.