ADVERTISEMENT

ಚುನಾವಣೆಗಾಗಿ ರಾಜ್ಯದ ಹಿತ ಬಲಿ: ಸಿದ್ದರಾಮಯ್ಯ ವಿರುದ್ಧ ಅಶೋಕ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 23:30 IST
Last Updated 23 ಮಾರ್ಚ್ 2024, 23:30 IST
<div class="paragraphs"><p>ಆರ್‌. ಅಶೋಕ (ಸಂಗ್ರಹ ಚಿತ್ರ)</p></div>

ಆರ್‌. ಅಶೋಕ (ಸಂಗ್ರಹ ಚಿತ್ರ)

   

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರ ಪರಿಹಾರದ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಮೂಲಕ ರಾಜ್ಯದ ಹಿತ ಬಲಿ ಕೊಡಲು ಹೊರಟಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಟೀಕಿಸಿದ್ದಾರೆ.

ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಸಿದ್ದರಾಮಯ್ಯನವರೇ ಚುನಾವಣೆ ಇದ್ದಾಗ ರಾಜಕೀಯ ಮಾಡಿ. ಆದರೆ, ರಾಜಕೀಯ ಕಥನವೊಂದನ್ನು ಹೆಣೆಯಲು ಪದೇ ಪದೇ ರಾಜ್ಯದ ಜನರ ಹಿತಾಸಕ್ತಿಯನ್ನು ಬಲಿ ಕೊಡುವುದು ಶೋಭೆ ತರುವುದಿಲ್ಲ’ ಎಂದಿದ್ದಾರೆ.

ADVERTISEMENT

ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಬರ, ಪ್ರವಾಹದಂತಹ ನೈಸರ್ಗಿಕ ವಿಕೋಪಗಳು ಎದುರಾದಾಗ ಕೇಂದ್ರ ಸರ್ಕಾರದ ನೆರವಿಗೆ ಕಾಯದೇ ರಾಜ್ಯ ಸರ್ಕಾರವೇ ಪರಿಹಾರ ವಿತರಿಸಿತ್ತು. ಆದರೆ, ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬರ ಪರಿಹಾರದ ವಿಚಾರದಲ್ಲೂ ರಾಜಕೀಯ ಮಾಡಿ ರೈತರಿಗೆ ದ್ರೋಹ ಬಗೆಯುತ್ತಿದೆ ಎಂದು ದೂರಿದ್ದಾರೆ.

2019ರಿಂದ 2022ರ ಅವಧಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ವಿಪತ್ತು ಪರಿಹಾರ ನಿಧಿಯಡಿ ರೈತರಿಗೆ ವಿತರಿಸಿದ ಮೊತ್ತದ ಅಂಕಿಅಂಶಗಳನ್ನು ಹಂಚಿಕೊಂಡಿರುವ ಅಶೋಕ, ‘ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಈ ರೀತಿಯ ನಾಟಕ ಹೊಸದೇನೂ ಅಲ್ಲ. 2014ರಲ್ಲಿ ಬರಗಾಲ ಇದ್ದಾಗ ಪರಿಹಾರ ವಿತರಣೆಗೆ ಒಂಬತ್ತು ತಿಂಗಳು ಸಮಯ ತೆಗೆದುಕೊಂಡಿತ್ತು’ ಎಂದು ವಾಗ್ದಾಳಿ ನಡೆಸಿದ್ದಾರೆ.

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಜತೆ ಹೇಗೆ ವ್ಯವಹರಿಸಬೇಕು ಎನ್ನುವುದನ್ನು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ನೋಡಿ ಸಿದ್ದರಾಮಯ್ಯ ಪಾಠ ಕಲಿಯಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.