
ಬೆಂಗಳೂರು: ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದುರ್ಬಲ ನಾಯಕ ಎಂದು ರಾಹುಲ್‌ಗಾಂಧಿಗೆ ಪತ್ರ ಬರೆಯುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕೆ.ಎನ್.ರಾಜಣ್ಣ ಅವರು ಕಾಂಗ್ರೆಸ್‌ಗೆ ಕೊಳ್ಳಿ ಇಟ್ಟಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
‘ಇವರ ಜಗಳದಿಂದ ಬೇಸತ್ತಿರುವ ಕಾಂಗ್ರೆಸ್ ಹೈಕಮಾಂಡ್ ನಿಮ್ಮ ಸಮಸ್ಯೆ ನೀವೇ ಬಗೆಹರಿಸಿಕೊಳ್ಳಿ ಎಂದು ಹೇಳಿ ಕೈಚೆಲ್ಲಿದೆ. ಇದರ ಅರ್ಥ ಹೈಕಮಾಂಡ್ ಕೂಡ ದುರ್ಬಲವಾಗಿದೆ. ಒಟ್ಟಾರೆ ಈ ಜಗಳದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
‘ಬೆಳಗಾವಿ ಅಧಿವೇಶನ ಕುರ್ಚಿ ಕಿತ್ತಾಟದಲ್ಲೇ ಕಳೆದು ಹೋಯಿತು. ಅಲ್ಲಿ ಉತ್ತರಕರ್ನಾಟಕದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಆದರೆ, ಆ ಭಾಗಕ್ಕೆ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಲಿಲ್ಲ. ಇದರಿಂದ ಅಲ್ಲಿನ ಜನ ನಿರಾಸೆಗೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಫೆಬ್ರುವರಿ ಮತ್ತು ಮಾರ್ಚ್ ತಿಂಗಳ ಹಣವನ್ನು ಏಕೆ ಪಾವತಿ ಮಾಡಿಲ್ಲ ಎಂಬುದಕ್ಕೆ ಸರ್ಕಾರ ಸರಿಯಾದ ಕಾರಣಗಳನ್ನು ನೀಡಿಲ್ಲ. ಇದರಿಂದ 1.26 ಕೋಟಿ ಮಹಿಳೆಯರಿಗೆ ಅನ್ಯಾಯವಾಗಿದೆ. ಮಹಿಳೆಯರಿಗೆ ಆ ಹಣ ಸಿಗುವವರೆಗೆ ನಾವು ಹೋರಾಟ ಮಾಡುತ್ತೇವೆ’ ಎಂದರು.
ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ರಾಜ್ಯ ಸರ್ಕಾರ ಮುಂದುವರಿಸುತ್ತಿಲ್ಲ. ಕೇಂದ್ರದಿಂದ ಪಡೆದ ಅನುದಾನಕ್ಕೆ ಬಿಲ್ ಕೂಡ ನೀಡಿಲ್ಲ. ಹೀಗಾಗಿ ಕೇಂದ್ರ ಅನುದಾನ ತಡೆ ಹಿಡಿದಿದೆ. ಇದರಿಂದ ರಾಜ್ಯ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಅಶೋಕ ಹೇಳಿದರು.
ಈ ಸರ್ಕಾರದ ಅವಧಿಯಲ್ಲಿ 206 ಕ್ಕೂ ಹೆಚ್ಚು ಆನೆಗಳು ಸತ್ತಿವೆ. 61 ಚಿರತೆ, 19 ನವಿಲು, ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದ ಜಿಂಕೆಗಳು ಸತ್ತಿವೆ. ಜಿಂಕೆಗಳನ್ನು ಕೊಂದು ಮಾಂಸ ಮಾರಾಟವಾಗುತ್ತಿದೆ. ವಿದೇಶದಿಂದ ಹಾವುಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ. ಕಳ್ಳ ದಂಧೆಯನ್ನು ತಪ್ಪಿಸಲಾಗದ ಸರ್ಕಾರ ಸಫಾರಿ ರದ್ದು ಮಾಡಿದೆ ಎಂದು ಅಶೋಕ ಟೀಕಿಸಿದರು.
‘ಅಧ್ಯಕ್ಷರ ಬದಲಾವಣೆ ಮಾಡಿ ಎಂದಿಲ್ಲ’
‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬದಲಾವಣೆ ಮಾಡಿ ಎಂದು ಯಾರೂ ವರಿಷ್ಠರನ್ನು ಕೇಳಿಲ್ಲ’ ಎಂದು ಅಶೋಕ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ‘ವಿಜಯೇಂದ್ರ ಅವರು ಈಗ ಅಧ್ಯಕ್ಷರಾಗಿದ್ದಾರೆ. ಬದಲಾವಣೆ ಮತ್ತಿತರ ವಿಚಾರಗಳಲ್ಲಿ ವರಿಷ್ಠರು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಬಿಜೆಪಿಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲ ಇಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.