ADVERTISEMENT

ಆರೂವರೆ ವರ್ಷದಿಂದ CM ಆಗಿ ಒಂದು ಯೋಜನೆಗೆ ಅಂಬೇಡ್ಕರ್‌ ಹೆಸರಿಟ್ಟಿದ್ದೀರಾ?: ಅಶೋಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2024, 5:08 IST
Last Updated 19 ಡಿಸೆಂಬರ್ 2024, 5:08 IST
<div class="paragraphs"><p>ಆರ್‌. ಅಶೋಕ </p></div>

ಆರ್‌. ಅಶೋಕ

   

ಬೆಂಗಳೂರು: ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸ್ಮರಣೆ ನಮಗೆ ವ್ಯಸನ ಅಲ್ಲ, ನಿತ್ಯ ಸ್ಮರಣೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಬಹಿರಂಗ ಪತ್ರ ಬರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಜಪವ ಮಾಡಿದರೇನು ತಪವ ಮಾಡಿದರೇನು ವಿಪರೀತ ಕಪಟಗುಣ ಕಲುಷವಿದ್ದವರು ಎಂಬ ಕನಕದಾಸರ ವಾಣಿಯಂತೆ, ಬಾಯಿ ಚಪಲಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಮೇಲೆ ತೋರಿಕೆಯ ಪ್ರೀತಿ, ಗೌರವ ಪ್ರದರ್ಶನ ಮಾಡುವ ನಿಮ್ಮ ಮನಸ್ಥಿತಿಯನ್ನು ಬದಿಗಿರಿಸಿ ಸಿಎಂ ಸಿದ್ದರಾಮಯ್ಯ’ ಎಂದು ಹೇಳಿದ್ದಾರೆ.

ADVERTISEMENT

‘ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ, ಅವರ ಅಂತ್ಯ ಸಂಸ್ಕಾರಕ್ಕೆ ಭೂಮಿ ನೀಡಲು ನಿರಾಕರಿಸಿದ, ಅಂಬೇಡ್ಕರ್‌ ಅವರನ್ನು ಬಿಟ್ಟು, ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡ ನೀಚ ಮನಸ್ಥಿತಿ ನಿಮ್ಮ ಕಾಂಗ್ರೆಸ್ ಪಕ್ಷದ್ದು‌. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾಷಣವನ್ನು ತಿರುಚಿ ಮತ್ತೊಮ್ಮೆ ಬಾಬಾ ಸಾಹೇಬರನ್ನು ಅವಮಾನಿಸುತ್ತಿದ್ದೀರಿ’ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಮಾಡಿದ ಮಹಾ ಮೋಸವನ್ನು, ಮಹಾ ಅಪಮಾನಗಳನ್ನು ಎಳೆ ಎಳೆಯಾಗಿ ದೇಶದ ಜನತೆಯ ಮುಂದೆ ಬಿಚ್ಚಿಟ್ಟ ಅಮಿತ್ ಶಾ ಅವರ ಭಾಷಣದಿಂದ ತಮಗೆ ಮುಜುಗರ, ಹತಾಶೆ ಆಗಿರುವುದು ಆಶ್ಚರ್ಯವೇನಲ್ಲ ಎಂದು ಅಶೋಕ ಟೀಕಿಸಿದ್ದಾರೆ.

‘ತಮಗೆ ತಾವೇ ಭಾರತ ರತ್ನ ಪ್ರಶಸ್ತಿ ಕೊಟ್ಟುಕೊಂಡು ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ಹಿಂದೆ ಮುಂದೆ ನೋಡುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ದೇಶದ ಜನ ತಿರಸ್ಕಾರ ಮಾಡದಿದ್ದರೆ ಇವತ್ತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೂ ಭಾರತ ರತ್ನ ಸಿಗುತ್ತಿತ್ತೇನೋ. ಆದರೆ, ಅಂಬೇಡ್ಕರ್ ಅವರಿಗೆ ಸಿಗುತ್ತಿರಲಿಲ್ಲ. ಅಂಬೇಡ್ಕರ್‌ ಅವರಿಗೆ ಭಾರತ ರತ್ನ ಎಂಬ ಪರಮೋಚ್ಛ ಗೌರವ ಲಭಿಸಬೇಕಾದರೆ ಬಿಜೆಪಿ ಬೆಂಬಲಿತ ಸರ್ಕಾರ ಬರಬೇಕಾಯಿತು’ ಎಂದು ಹೇಳಿದ್ದಾರೆ.

‘ಹತ್ತಾರು ಕೋಟಿ ಖರ್ಚು ಮಾಡಿ ‘ಸಿದ್ದರಾಮೋತ್ಸವ’ ಮಾಡಿಸಿಕೊಳ್ಳುವ ತಮಗೆ ‘ಅಂಬೇಡ್ಕರ್ ಉತ್ಸವ’ ಮಾಡಬೇಕು ಅನ್ನಿಸೋದೇ ಇಲ್ಲ. ಯಾಕೆಂದರೆ ತಮಗೆ ಅಂಬೇಡ್ಕರ್ ನೆನಪಾಗೋದು ಚುನಾವಣೆ ಸಂದರ್ಭದಲ್ಲಿ ಮಾತ್ರ. ಕುರ್ಚಿಗಾಗಿ, ಅಧಿಕಾರಕ್ಕಾಗಿ ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ದುಂಬಾಲು ಬೀಳುವ ತಮಗೆ, ಇಂದಿರಾ ಕ್ಯಾಂಟೀನ್ ಬದಲು ಅಂಬೇಡ್ಕರ್ ಕ್ಯಾಂಟೀನ್ ಎಂದು ಹೆಸರಿಡಬಹುದಾಗಿತ್ತು ಎಂದು ಅನ್ನಿಸಲೇ ಇಲ್ಲ. ಯಾಕೆಂದರೆ ತಮಗೆ ಅಂಬೇಡ್ಕರ್ ಅವರ ಬಗ್ಗೆ ಬದ್ಧತೆಯೇ ಇಲ್ಲ. ಆರೂವರೆ ವರ್ಷ ಮುಖ್ಯಮಂತ್ರಿ ಆಗಿರುವ ತಾವು ಯಾವುದಾದರೂ ಒಂದು ಯೋಜನೆಗೆ, ಒಂದು ಕಾರ್ಯಕ್ರಮಕ್ಕೆ ಅಂಬೇಡ್ಕರ್ ಅವರ ಹೆಸರಿಟ್ಟಿದ್ದೀರಾ?’ ಎಂದು ಅಶೋಕ ಪ್ರಶ್ನಿಸಿದ್ದಾರೆ.

‘ಅಮಿತ್ ಶಾ ಅವರ ಭಾಷಣವನ್ನು ತಿರುಚಿ, ಅರ್ಧ ಸತ್ಯ ಹೇಳುವ ವಿಡಿಯೊ ಹಾಕಿ ತಾವು ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಬಹುದಷ್ಟೇ. ಆದರೆ ಅಂಬೇಡ್ಕರ್ ಅವರ ಬಗ್ಗೆ, ಅವರು ರಚಿಸಿದ ಸಂವಿಧಾನದ ಬಗ್ಗೆ ತಮ್ಮ ಹಾಗೂ ತಮ್ಮ ದಲಿತ ವಿರೋಧಿ ಕಾಂಗ್ರೆಸ್ ಪಕ್ಷದ ಆಷಾಢಭೂತಿತನವನ್ನ ಮರೆಮಾಚಲು ಸಾಧ್ಯವೇ ಇಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

ಅಂಬೇಡ್ಕರ್ ಅವರ ಬಗ್ಗೆ ತಮ್ಮದು ಅಂತರಂಗ ಶುದ್ಧಿಯೂ ಇಲ್ಲದ, ಬಹಿರಂಗ ಶುದ್ಧಿಯೂ ಇಲ್ಲದ ಚುನಾವಣಾ ಬೂಟಾಟಿಕೆ ಮಾತ್ರ ಅನ್ನೋದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.