ADVERTISEMENT

ನಾಯಿಗಳ ಹೆಸರಿನಲ್ಲೂ ಲೂಟಿಗೆ ಯೋಜನೆ: ಆರ್‌.ಅಶೋಕ ಟೀಕೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 15:56 IST
Last Updated 12 ಜುಲೈ 2025, 15:56 IST
ಆರ್.ಅಶೋಕ
ಆರ್.ಅಶೋಕ   

ಬೆಂಗಳೂರು: ‘ಬಿಬಿಎಂಪಿ ಮೂಲಕ ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಯೋಜನೆಯ ಹಿಂದೆ ಇರುವುದು ತೆರಿಗೆ ಹಣ ಲೂಟಿ ಹೊಡೆಯುವ ಉದ್ದೇಶ ಮಾತ್ರ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಟೀಕಿಸಿದರು.

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬೀದಿನಾಯಿಗಳ ಉಪಟಳದಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ನಾಯಿಗಳ ಸಂಖ್ಯೆ ಕಡಿಮೆ ಮಾಡಬೇಕು ಎಂಬ ಉದ್ದೇಶದ ಯೋಜನೆ ಬಿಬಿಎಂಪಿಯಲ್ಲಿದೆ. ಅದನ್ನು ಮೊದಲು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಿ’ ಎಂದರು.

‘ಬೀದಿನಾಯಿಗಳ ಬಗ್ಗೆ ಇವರಿಗೆ ಕಾಳಜಿ ಪ್ರಾಮಾಣಿಕವೇ ಆಗಿದ್ದರೆ, ಅವುಗಳಿಗಾಗಿ ಒಂದು ಆಸ್ಪತ್ರೆ ನಿರ್ಮಿಸಬಹುದಿತ್ತು. ಬೀದಿ ಬದಿಯಲ್ಲಿ ಬಿದ್ದಿರುವ ನಾಯಿ ಅಥವಾ ಅಪಘಾತಕ್ಕೊಳಗಾದ ನಾಯಿಗಳನ್ನು ತಂದು ಚಿಕಿತ್ಸೆ ನೀಡಬಹುದಿತ್ತು. ಅದನ್ನು ಬಿಟ್ಟು, ಬಿರಿಯಾನಿ ಹಾಕುವ ಅಗತ್ಯವೇನಿದೆ’ ಎಂದು ಪ್ರಶ್ನಿಸಿದರು.

ADVERTISEMENT

‘ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿವೆ. ಉದ್ಯಾನಗಳ ನಿರ್ವಹಣೆ ಆಗುತ್ತಿಲ್ಲ. ಬಿಬಿಎಂಪಿ ಆಸ್ಪತ್ರೆಗಳಲ್ಲಿ ಸಿಬ್ಬಂದಿಗೆ ಸಂಬಳ ಕೊಡಲು ಹಣವಿಲ್ಲ. ಶಾಲೆಗಳ ಶಿಕ್ಷಕರಿಗೆ ಸಂಬಳ ನೀಡುತ್ತಿಲ್ಲ. ಯಾವುದಕ್ಕೂ ಹಣ ಇಲ್ಲ ಎಂದಾಗಿರುವಾಗ, ಇಂತಹ ದುಂದುವೆಚ್ಚದ ಯೋಜನೆ ಅಗತ್ಯವಿಲ್ಲ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮಕ್ಕಳಿಗೆ ₹12.45 ನಾಯಿಗಳಿಗೆ ₹22’

ರಾಜ್ಯ ಸರ್ಕಾರವು ಪೌಷ್ಟಿಕ ಆಹಾರ ಬಿಸಿಯೂಟ ಯೋಜನೆ ಅಡಿಯಲ್ಲಿ ಪ್ರತಿ ಮಗುವಿಗೆ ₹12.45 ವೆಚ್ಚ ಮಾಡುತ್ತಿದೆ. ಆದರೆ ಪ್ರತಿ ಬೀದಿ ನಾಯಿಗೆ ಬಿರಿಯಾನಿ ನೀಡಲು ₹22 ವೆಚ್ಚ ಮಾಡಲು ಮುಂದಾಗಿದೆ. ಬಡಮಕ್ಕಳಿಗೆ ಅನ್ಯಾಯ ಮಾಡುತ್ತಿದೆ’ ಎಂದು ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು. ‘ಬಿಬಿಎಂಪಿಯು 2023ರಲ್ಲಿ ನಡೆಸಿದ್ದ ಸಮೀಕ್ಷೆ ಪ್ರಕಾರ ನಗರದಲ್ಲಿ ಸುಮಾರು 4 ಲಕ್ಷ ಬೀದಿ ನಾಯಿಗಳಿವೆ. ಆದರೆ ಈಗ 4000 ನಾಯಿಗಳಿಗಷ್ಟೇ ಕೋಳಿ ಬಿರಿಯಾನಿ ನೀಡಲು ಸರ್ಕಾರ ಯೋಜನೆ ರೂಪಿಸಿ ಉಳಿದ ಲಕ್ಷಾಂತರ ನಾಯಿಗಳನ್ನು ಕಡೆಗಣಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.