ADVERTISEMENT

ಸಿದ್ದರಾಮಯ್ಯ ವಯನಾಡ್‌ನ ನಿಧಿ ಸಂಗ್ರಾಹಕನಂತೆ ವರ್ತಿಸುತ್ತಿದ್ದಾರೆ: ಅಶೋಕ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಅಕ್ಟೋಬರ್ 2025, 7:15 IST
Last Updated 30 ಅಕ್ಟೋಬರ್ 2025, 7:15 IST
<div class="paragraphs"><p>ಅಶೋಕ ಹಾಗೂ ಸಿದ್ದರಾಮಯ್ಯ</p></div>

ಅಶೋಕ ಹಾಗೂ ಸಿದ್ದರಾಮಯ್ಯ

   

– ಪ್ರಜಾವಾಣಿ ಚಿತ್ರಗಳು

ಬೆಂಗಳೂರು: ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ಎಕ್ಸ್ ಖಾತೆಯಲ್ಲಿ ವಯನಾಡ್ ಪ್ರವಾಸೋದ್ಯಮದ ಬಗ್ಗೆ ಪೋಸ್ಟ್ ಮಾಡಿದ್ದನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದ ನಾಯಕ ಆರ್. ಆಶೋಕ ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಅವರು,

‘ವಯನಾಡಿನ ಜಿಲ್ಲಾಧಿಕಾರಿ ಮತ್ತು ನಿಧಿ ಸಂಗ್ರಾಹಕರಂತೆ ವರ್ತಿಸುವ ಮುಖ್ಯಮಂತ್ರಿಯನ್ನು ಕರ್ನಾಟಕವು ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.

‘ಕರ್ನಾಟಕದ ತೆರಿಗೆದಾರರ ₹10 ಕೋಟಿ ಹಣವನ್ನು ಮಿಂಚಿನ ವೇಗದಲ್ಲಿ ವಯನಾಡಿಗೆ ಬಿಡುಗಡೆ ಮಾಡಿದ್ದೀರಿ, ಆನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ₹15 ಲಕ್ಷ ನೀಡಿದ್ದೀರಿ, ಭೂಕುಸಿತದ ನಡೆದ ವಯನಾಡಿನಲ್ಲಿ 100 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಹೇಳಿದ್ದೀರಿ, ಕರ್ನಾಟಕದ ಪ್ರವಾಸೋದ್ಯಮ ನಿಗಮವಾದ ಕೆಎಸ್‌ಟಿಡಿಸಿಯನ್ನು ಬಳಸಿ ಪ್ರಿಯಾಂಕಾ ಗಾಂಧಿಯವರ ಕ್ಷೇತ್ರ ವಯನಾಡ್‌ನ ಪ್ರವಾಸೋದ್ಯಮವನ್ನು ಪ್ರಚಾರ ಮಾಡಿದ್ದೀರಿ’ ಎಂದು ಬರೆದುಕೊಂಡಿದ್ದಾರೆ.

‘ಉತ್ತರ ಕರ್ನಾಟಕ ಮುಳುಗುತ್ತಿದೆ, ರೈತರು ನರಳುತ್ತಿದ್ದಾರೆ, ಮನೆಗಳು ಕೊಚ್ಚಿಹೋಗಿವೆ, 12.5 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ.. ಇವುಗಳಿಗೆ ಪರಿಹಾರ ನೀಡುವುದು ಇನ್ನೂ ಕಡತ, ಸಮೀಕ್ಷೆ, ನೆಪ ಮತ್ತು ಭಾಷಣಕ್ಕೆ ಸೀಮಿತವಾಗಿದೆ’ ಎಂದು ಹೇಳಿದ್ದಾರೆ.

ಕಲಬುರಗಿ, ರಾಯಚೂರು, ಯಾದಗಿರಿ, ಬೀದರ್, ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿಯ ಜನರಿಗೆ ಪರಿಹಾರದ ಹಣ ಎಲ್ಲಿದೆ? ನಿಮ್ಮ ಆದ್ಯತೆಗಳೇನು? ಎಂದು ಪ್ರಶ್ನಿಸಿದ್ದಾರೆ.

ನೀವು ನಮ್ಮದೇ ರಾಜ್ಯದ ವಿಕೋಪ ಪೀಡಿತ ರೈತರಿಗೆ ಹಣ ನೀಡುವ ಮೊದಲು ಮತ್ತೊಂದು ರಾಜ್ಯಕ್ಕೆ ನೀಡಿದ್ದೀರಿ. ಇದು ದಾನವಲ್ಲ, ನಿಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಹೈಕಮಾಂಡ್‌ಗೆ ಮಾಡುವ ಓಲೈಕೆ. ನಕಲಿ ಗಾಂಧಿ ಕುಟುಂಬಕ್ಕೆ ಮಣಿಯುವ, ನಮ್ಮ ಹಣವನ್ನು ಹೈಕಮಾಂಡ್‌ನ ಎಟಿಎಂನಂತೆ ಖರ್ಚು ಮಾಡುವ, ತನಗೆ ಅನ್ನ ನೀಡಿದ ತನ್ನದೇ ರಾಜ್ಯದ ರೈತರನ್ನು ಮರೆಯುವ ಮುಖ್ಯಮಂತ್ರಿ ಕರ್ನಾಟಕಕ್ಕೆ ಬೇಕಾಗಿಲ್ಲ ಎಂದು ಕಿಡಿ ಕಾರಿದ್ದಾರೆ

ನಾವು ಆಯ್ಕೆ ಮಾಡಿದ್ದು ಕರ್ನಾಟಕದ ಮುಖ್ಯಮಂತ್ರಿಯನ್ನೇ ಹೊರತು ದೆಹಲಿಯ ಕೈಗೊಂಬೆಯನ್ನಲ್ಲ, ವಯನಾಡಿನ ಬ್ರಾಂಡ್ ಅಂಬಾಸಿಡರ್ ಅನ್ನು ಅಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.