ADVERTISEMENT

ಕುಸುಮಾ ಕಣ್ಣೀರಿಗೂ, ಮುನಿರತ್ನ ಕಣ್ಣೀರಿಗೂ ವ್ಯತ್ಯಾಸವಿದೆ: ಡಿಕೆಶಿ

ಜನರು ಕೇಳುವ ಪ್ರಶ್ನೆಗೆ ಉತ್ತರ ಕೊಡಲಾಗದೆ ಮುನಿರತ್ನ ಕಣ್ಣೀರು ಹಾಕಿದ್ದಾರೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 12:08 IST
Last Updated 29 ಅಕ್ಟೋಬರ್ 2020, 12:08 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಬೆಂಗಳೂರು: ‘ನಮ್ಮ ಪಕ್ಷದ ಅಭ್ಯರ್ಥಿ ಕುಸುಮಾ ಅವರ ಕಣ್ಣೀರಿಗೂ, ಬಿಜೆಪಿ ಅಭ್ಯರ್ಥಿ ಮುನಿರತ್ನ ಸುರಿಸುವ ಕಣ್ಣೀರಿಗೂ ವ್ಯತ್ಯಾಸ ಇದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಆರ್‌.ಆರ್‌. ನಗರದಲ್ಲಿ ಇತರ ಪಕ್ಷಗಳ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡ ಬಳಿಕ ಮಾತನಾಡಿದ ಅವರು, 'ಕುಸುಮಾ ಅವರು ತಮ್ಮ ಜೀವನ, ಎದುರಾದ ನಷ್ಟ, ನೋವುಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಆದರೆ, ಮುನಿರತ್ನ ತಮಗೆ ಇಂತಹ ಸ್ಥಿತಿ ತಂದುಕೊಂಡೆನಲ್ಲಾ ಎಂದು ಕಣ್ಣೀರು ಹಾಕುತ್ತಿದ್ದಾರೆ’ ಎಂದರು.

‘ಕಾಂಗ್ರೆಸ್ ನನ್ನ ಉಸಿರು, ನನ್ನ ರಕ್ತ ಎಂದು ಹೇಳಿದ್ದ ಮುನಿರತ್ನ ಈಗ ಬಿಜೆಪಿಯಲ್ಲಿ ಮತ ಕೇಳುತ್ತಿದ್ದೇನಲ್ಲ ಎಂದು ನೆನಪಿಸಿಕೊಂಡು ಅಳುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಮುನಿರತ್ನ ಉತ್ತಮ ನಟ, ನಿರ್ಮಾಪಕ ಅಲ್ವಾ. ಜನರು ಕೇಳುವ ಪ್ರಶ್ನೆಗೆ ಉತ್ತರ ಕೊಡಲಾಗದೆ ಕಣ್ಣೀರು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ವಿರುದ್ಧ ಭಾಷಣ ಮಾಡಿದ್ದರು. ಈಗ ಅವರ ಪಕ್ಷ ಸೇರಿಕೊಂಡು ಚುನಾವಣೆ ಎದುರಿಸಬೇಕಾಗಿದೆಯಲ್ಲ ಎಂದು ಕಣ್ಣೀರು ಹಾಕಿರಬಹುದು’ ಎಂದರು.

‘ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದು ಈ ಹಿಂದೆ ಮುನಿರತ್ನ ಹೇಳುತ್ತಿದ್ದರು. ಈಗ ಶಿವಕುಮಾರ್ ಅವರ ಹಿಂದೆ ಯಾರೂ ಇಲ್ಲ ಎಂದು ಹೇಳುತ್ತಿದ್ದಾರೆ. ಅವರು ಪರಿಸ್ಥಿತಿಗೆ ತಕ್ಕಂತೆ ಅಭಿನಯಿಸುವ ಉತ್ತಮ ನಟ. ಇದನ್ನು ನೋಡುತ್ತಿರುವ ಜನ ದಡ್ಡರಲ್ಲ. ಈಗ ಕಣ್ಣೀರು ಹಾಕಿ ಪ್ರಯೋಜನ ಇಲ್ಲ’ ಎಂದರು.

ಕಪಾಲಿ ಬೆಟ್ಟದ ವಿಷಯವನ್ನು ಬಿಜೆಪಿ ನಾಯಕರು ಪ್ರಸ್ತಾಪಿಸಿದ ಬಗ್ಗೆ ಕೇಳಿದ, ‘ನ. 3ರಂದು ನಡೆಯುವ ಚುನಾವಣೆ ಮುಗಿಯಲಿ. ಆಮೇಲೆ ಧರ್ಮದ ವಿಚಾರ ಮಾತನಾಡೋಣ' ಎಂದರು.

'ಮುನಿರತ್ನ ಅವರ ವಿರುದ್ಧ ಮೋದಿ, ಸದಾನಂದಗೌಡ, ಯಡಿಯೂರಪ್ಪನವರು ಆಡಿದ ಮಾತಿಗೆ ಈಗಲೂ ಬದ್ಧರಾಗಿದ್ದಾರಾ ಎಂಬುದನ್ನು ಕೇಳಿ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.