ADVERTISEMENT

ರಾಘವೇಶ್ವರ ಸ್ವಾಮೀಜಿ ವಿರುದ್ಧ ಅತ್ಯಾಚಾರ ಆರೋಪ: ತೀರ್ಪು ಕಾಯ್ದಿರಿಸಿದ 'ಸುಪ್ರೀಂ'

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 15:46 IST
Last Updated 10 ಡಿಸೆಂಬರ್ 2025, 15:46 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧ ದಾಖಲಾಗಿದ್ದ ಎರಡು ಅತ್ಯಾಚಾರ ಆರೋಪ ಪ್ರಕರಣಗಳನ್ನು ರದ್ದುಗೊಳಿಸಿದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ವಿಶೇಷ ಮೇಲ್ಮನವಿ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್‌, ತೀರ್ಪು ಕಾಯ್ದಿರಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಹಾಗೂ ಸಂದೀಪ್‌ ಮೆಹ್ತಾ ಅವರ ಪೀಠವು, ಇದೇ 19ರೊಳಗೆ ಲಿಖಿತ ವಾದಗಳನ್ನು ಸಲ್ಲಿಸುವಂತೆ ವಕೀಲರಿಗೆ ಸೂಚಿಸಿತು. 

ರಾಘವೇಶ್ವರ ಸ್ವಾಮೀಜಿ ಪರ ವಕೀಲರು, ‘ಇದೊಂದು ಕೌಟುಂಬಿಕ ಕಲಹ ಪ್ರಕರಣ. ಈ ಪ್ರಕರಣದಲ್ಲಿ ಅನಗತ್ಯವಾಗಿ ಸ್ವಾಮೀಜಿ ಅವರನ್ನು ಸಿಲುಕಿಸಲಾಗಿದೆ’ ಎಂದು ವಾದಿಸಿದರು. 

ADVERTISEMENT

ಸ್ವಾಮೀಜಿ ಅವರನ್ನು ಅತ್ಯಾಚಾರ ಆರೋಪ ಪ್ರಕರಣದಿಂದ ಬಿಡುಗಡೆಗೊಳಿಸಿ ಸೆಷನ್ಸ್‌ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿದ್ದ ಪುನರ್ ಪರಿಶೀಲನಾ ಕ್ರಿಮಿನಲ್‌ ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿ, ‘ಪ್ರಕರಣದಲ್ಲಿನ ದೋಷಾರೋಪ ಪಟ್ಟಿಯೇ ದೋಷಪೂರಿತವಾಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಮೊದಲ ಪ್ರಕರಣವೇನು?

ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ರಾಮಕಥಾ ಗಾಯಕಿ 2014ರ ಆಗಸ್ಟ್‌ 17ರಂದು ಅತ್ಯಾಚಾರ ಆರೋಪ ಹೊರಿಸಿ ದೂರು ದಾಖಲಿಸಿದ್ದರು. ಈ ಕುರಿತಂತೆ ತನಿಖೆ ನಡೆಸಿದ್ದ ಸಿಐಡಿ ನ್ಯಾಯಾಲಯಕ್ಕೆ ದೋಷಾರೋಪಣೆ ವರದಿ ಸಲ್ಲಿಸಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ 54ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಜಿ.ಬಿ.ಮುದಿಗೌಡರ್ 2016ರ ಮಾರ್ಚ್ 31ರಂದು ಆದೇಶ ನೀಡಿ ಸ್ವಾಮೀಜಿಯನ್ನು ಆರೋಪಗಳಿಂದ ಬಿಡುಗಡೆಗೊಳಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಸಂತ್ರಸ್ತೆ ಮತ್ತು ಪ್ರಾಸಿಕ್ಯೂಷನ್‌ ಹೈಕೋರ್ಟ್‌ನಲ್ಲಿ ಪ್ರತ್ಯೇಕ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿಗಳನ್ನು ಸಲ್ಲಿಸಿದ್ದರು.

ಎರಡನೇ ಪ್ರಕರಣವೇನು?

‘ತಮ್ಮ ಮಠದ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 15 ವಯಸ್ಸಿನ ಬಾಲಕಿ ಪ್ರತಿಭಟಿಸಿದರೂ ಲೆಕ್ಕಿಸದೆ ಸ್ವಾಮೀಜಿ; ಆಕೆಯ ಮೇಲೆ ಬಲ ಪ್ರಯೋಗಿಸಿ ಅತ್ಯಾಚಾರ ನಡೆಸಿದ್ದಾರೆ’ ಎಂಬ ಆರೋಪವನ್ನು ಶ್ರೀಗಳು ಎದುರಿಸಿದ್ದರು.

ಸ್ವಾಮೀಜಿ ವಿರುದ್ಧ 2015ರ ಆಗಸ್ಟ್ 29ರಂದು ದಾಖಲಾಗಿದ್ದ ಎಫ್ಐಆರ್‌ಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಸಿಐಡಿ, ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿತ್ತು.

ಈ ಕುರಿತಂತೆ ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಸ್ವಾಮೀಜಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಎರಡನೇ ಅತ್ಯಾಚಾರ ಆರೋಪ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.