ಬೆಂಗಳೂರು: ‘ರಾಹುಲ್‌ಗಾಂಧಿ ಸುಳ್ಳಿಗೆ ಕನ್ನಡಿ ಹಿಡಿದ ಪರಿಶಿಷ್ಟ ಪಂಗಡದ ಮಂತ್ರಿಗೆ ವಜಾ ಗ್ಯಾರಂಟಿ ಭಾಗ್ಯ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
ಈ ಕುರಿತು ‘ಎಕ್ಸ್’ ಮಾಡಿರುವ ಅವರು, ‘ಕಾಂಗ್ರೆಸ್ ಪಕ್ಷಕ್ಕೆ ಸತ್ಯ ಎಂದರೆ ಅಲರ್ಜಿ, ಸುಳ್ಳು ಎಂದರೆ ಎನರ್ಜಿ. 2024 ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗಲೇ ಮತದಾರರ ಪಟ್ಟಿ ಸಿದ್ಧಪಡಿಸಿದ್ದು ಎಂಬ ಸರಳ ಸತ್ಯವನ್ನು ಹೇಳಿದ್ದೇ ಸಚಿವ ರಾಜಣ್ಣ ಅವರಿಗೆ ಮುಳುವಾಗಿದೆ’ ಎಂದು ತಿಳಿಸಿದ್ದಾರೆ.
‘ರಾಜಣ್ಣ ಅವರನ್ನು ಈ ರೀತಿ ಅಗೌರವವಾಗಿ, ಸಂಪುಟದಿಂದ ವಜಾ ಮಾಡಿರುವುದು ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ಮನಸ್ಥಿತಿಗೆ ಮತ್ತೊಂದು ತಾಜಾ ಉದಾಹರಣೆ. ಅಂಬೇಡ್ಕರ್ ಅವರನ್ನೇ ಸೋಲಿಸಿದ ಕಾಂಗ್ರೆಸ್‌ನವರು ರಾಜಣ್ಣ ಅವರ ಸತ್ಯವನ್ನು ಸಹಿಸುತ್ತಾರಾ’ ಎಂದು ಪ್ರಶ್ನಿಸಿದ್ದಾರೆ.
‘ರಾಜಣ್ಣ ಒಬ್ಬ ಹಿರಿಯ ಅನುಭವಿ ರಾಜಕಾರಣಿ. ತಮ್ಮ ಇಲಾಖೆಯಲ್ಲಿ ದಕ್ಷತೆಯಿಂದ ಕೆಲಸ ಮಾಡಿದ್ದರು. ಎಸ್‌ಟಿ ಸಮುದಾಯದ ಹಿರಿಯ ನಾಯಕ ಅವರಿಗೆ ರಾಜೀನಾಮೆ ಕೊಡಲು ಅವಕಾಶ ಕೊಡದೇ ಇರುವುದು ಅವರ ಅನುಭವ, ದಕ್ಷತೆ, ಎಸ್ಟಿ ಜನಾಂಗಕ್ಕೆ ಮಾಡಿರುವ ಅವಮಾನ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
‘ಈ ಬೆಳವಣಿಗೆ ಸಿದ್ದರಾಮಯ್ಯ ಅವರಿಗೆ ಹಿನ್ನಡೆ. ಮುಂದಿನ ದಿನಗಳಲ್ಲಿ ಎಚ್ಚರಿಕೆ ಗಂಟೆ. ಇದರಿಂದ ರಾಜಣ್ಣ ಹೇಳಿದಂತೆ ‘ಕ್ರಾಂತಿ’ ಆರಂಭವಾಗಿದೆ. ಏನೇ ಆದರೂ ಮತ ಪಟ್ಟಿ ಪರಿಷ್ಕರಣೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಆಗಿದೆ ಎನ್ನುವುದು ಕಟು ಸತ್ಯ. ಅದನ್ನು ಅಳಿಸಲು ಸಾಧ್ಯವಿಲ್ಲ. ಸತ್ಯದ ಕನ್ನಡಿಯಂತೆ ರಾಹುಲ್‌ಗಾಂಧಿಗೆ ಹೇಳಿರುವುದಕ್ಕೆ ಮೆಚ್ಚಬೇಕು. ಆದರೆ ಪ್ರಾಮಾಣಿಕರಿಗೆ ಕಾಂಗ್ರೆಸ್‌ನಲ್ಲಿ ಜಾಗ ಇಲ್ಲ’ ಎಂದು ಹೇಳಿದ್ದಾರೆ.
ರಾಜಣ್ಣ ಅವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಮಾಡಿದ್ದೇ ಡಿ.ಕೆ.ಶಿವಕುಮಾರ್. ಈ ಮೂಲಕ ಸಿದ್ದರಾಮಯ್ಯ ಅವರಿಗೆ ಬಲವಾದ ಹೊಡೆತ ನೀಡಿದ್ದಾರೆಅರವಿಂದ ಬೆಲ್ಲದ ವಿರೋಧ ಪಕ್ಷದ ಉಪನಾಯಕ
ಮತ ಕಳ್ಳತನ ದ ಕುರಿತು ರಾಹುಲ್‌ಗಾಂಧಿ ಅವರ ಸುಳ್ಳು ಆರೋಪಕ್ಕೆ ಕೆ.ಎನ್.ರಾಜಣ್ಣ ಅವರು ಇರುವ ಸತ್ಯವನ್ನೇ ಹೇಳಿದ್ದರು. ಅದಕ್ಕೆ ಕಾಂಗ್ರೆಸ್ ಹೈಕಮಾಂಡ್ ಶಿಕ್ಷೆ ವಿಧಿಸಿದೆಸಿ.ಟಿ. ರವಿವಿಧಾನ ಪರಿಷತ್ತಿನ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.