
ಡಿ.ಕೆ.ಶಿವಕುಮಾರ್
ಬೆಂಗಳೂರು: ‘ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜೈಲಿಗೆ ಹಾಕಿದರೂ ಹೆದರುವುದಿಲ್ಲ. ಕೇಂದ್ರ ಸರ್ಕಾರದ ದ್ವೇಷ ರಾಜಕಾರಣ ಸರಿಯಲ್ಲ. ಇದರಿಂದ ಅವರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಯಂಗ್ ಇಂಡಿಯಾ, ನ್ಯಾಷನಲ್ ಹೆರಾಲ್ಡ್‌ಗಳು ಸೋನಿಯಾ, ರಾಹುಲ್ ಗಾಂಧಿ ಅವರ ವೈಯಕ್ತಿಕ ಆಸ್ತಿಯಲ್ಲ, ಅದು ಪಕ್ಷದ ಆಸ್ತಿ. ಇಬ್ಬರೂ ಪಕ್ಷದ ಪಾಲಕರು. ಸಂಸ್ಥೆಯಲ್ಲಿ ಹಲವು ಸದಸ್ಯರು ಇದ್ದಾರೆ. ಮೊರಾರ್ಜಿ ದೇಸಾಯಿ, ಅಹಮದ್ ಪಟೇಲ್ ಅವರ ಕಾಲದಲ್ಲೇ ಕಾಂಗ್ರೆಸ್ ಪಕ್ಷದ ಹಿತಕ್ಕಾಗಿ ಕೆಲವು ನಿರ್ಧಾರ ಕೈಗೊಳ್ಳಲಾಗಿತ್ತು ಎಂದರು.
‘ಸೀತಾರಾಮ್ ಕೇಸರಿ ಅವರ ಕಾಲದಲ್ಲಿ ಪಕ್ಷ ಸಂಕಷ್ಟದಲ್ಲಿದ್ದಾಗ, ಕಾಂಗ್ರೆಸ್ ನಾಯಕರಾದ ನಾವು ಸೋನಿಯಾ ಗಾಂಧಿ ಅವರ ಮುಂದೆ ಹೋಗಿ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳುವಂತೆ ಬೇಡಿಕೊಂಡಿದ್ದೆವು. ಅವರು ನೇತೃತ್ವ ವಹಿಸಿದ ನಂತರ ನಮ್ಮ ಪಕ್ಷ ದೇಶದ ಅತ್ಯುತ್ತಮ ಆರ್ಥಿಕ ತಜ್ಞರ ಮುಂದಾಳತ್ವದಲ್ಲಿ 10 ವರ್ಷ ಆಡಳಿತ ನಡೆಸಿದೆ. ಈಗ ರಾಜಕೀಯವಾಗಿ ಕಿರುಕುಳ ನೀಡಲು ಅವರಿಗೆ ಈ ರೀತಿ ಮಾಡಲಾಗುತ್ತಿದೆ. ಇತಿಹಾಸ ಮುಂದಿನ ದಿನಗಳಲ್ಲಿ ಮರುಕಳಿಸಲಿದೆ’ ಎಂದು ಹೇಳಿದರು.
‘ರಾಜಕೀಯವನ್ನು ನೇರಾನೇರವಾಗಿ ಜನರ ಮಧ್ಯೆ ಮಾಡಬೇಕು. ಚುನಾವಣೆಯಲ್ಲಿ ಹೋರಾಡೋಣ. ಆದರೆ, ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಈ ರೀತಿ ಕಿರುಕುಳ ನೀಡುವುದು ಸರಿಯಲ್ಲ. ನ್ಯಾಷನಲ್ ಹೆರಾಲ್ಡ್ ಪ್ರಕರಣ ಕೇಂದ್ರ ಸರ್ಕಾರದ ನೈತಿಕತೆ ಕುಗ್ಗಿಸಲಿದೆ‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.