ADVERTISEMENT

ರಾಜ್ಯ ರೈಲ್ವೆ ಯೋಜನೆಗಳಿಗೆ ₹2,574 ಕೋಟಿ: ಉಪನಗರ ರೈಲು ಪ್ರಸ್ತಾಪವಿಲ್ಲ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 18:18 IST
Last Updated 2 ಫೆಬ್ರುವರಿ 2021, 18:18 IST
ಉಪನಗರ ರೈಲು
ಉಪನಗರ ರೈಲು   

ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ ರೈಲ್ವೆಗೆ ಸಂಬಂಧಿಸಿದ ಪಿಂಕ್ ಬುಕ್‌ನಲ್ಲಿ ಉಪನಗರ ರೈಲು ಯೋಜನೆಯ ಪ್ರಸ್ತಾಪವೇ ಇಲ್ಲ. ಆದರೆ, ರಾಜ್ಯದ ವಿವಿಧ ಯೋಜನೆಗಳಿಗೆ ₹2,574 ಕೋಟಿ ನೀಡಲಾಗಿದೆ.

ಹೊಸ ಮಾರ್ಗಗಳ ನಿರ್ಮಾಣಕ್ಕೆ ₹1,256 ಕೋಟಿ, ಜೋಡಿ ಮಾರ್ಗಗಳ ನಿರ್ಮಾಣಕ್ಕೆ ₹1,318 ಕೋಟಿ ನಿಗದಿ ಮಾಡಲಾಗಿದೆ. ಈ ಪೈಕಿ ಕಂಟೋನ್ಮೆಂಟ್‌ನಿಂದ ವೈಟ್‌ಫೀಲ್ಡ್‌ ನಡುವೆ ನಿರ್ಮಾಣ ಆಗಲಿರುವ ಚತುಷ್ಪಥ ಮಾರ್ಗವೂ ಸೇರಿದೆ.

ಕೆ–ರೈಡ್‌(ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ) ಮೂಲಕ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿರುವ ಯಶವಂತಪುರ-ಬಾಣಸವಾಡಿ-ಹೆಬ್ಬಾಳ-ಚನ್ನಸಂದ್ರ ಜೋಡಿ ಮಾರ್ಗಕ್ಕೆ ₹71 ಕೋಟಿ, ಬೈಯಪ್ಪನಹಳ್ಳಿ–ಹೊಸೂರು ಜೋಡಿ ಮಾರ್ಗಕ್ಕೆ ₹80 ಕೋಟಿ ಸೇರಿ ಒಟ್ಟು ₹151 ಕೋಟಿ ನೀಡಲಾಗಿದೆ.

ADVERTISEMENT

ಆದರೆ, ಬಹು ನಿರೀಕ್ಷಿತ ಉಪನಗರ ರೈಲು ಯೋಜನೆಯ ಪ್ರಸ್ತಾಪವೇ ಇಲ್ಲದಿರುವುದು ನಗರದ ನಾಗರಿಕರಲ್ಲಿ ನಿರಾಸೆ ಹುಟ್ಟಿಸಿದೆ. 148. 17 ಕಿ.ಮೀ ಉದ್ದದ ಉಪನಗರ ರೈಲು ಮಾರ್ಗಕ್ಕೆ ₹ 16,500 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಇದಕ್ಕೆ ರೈಲ್ವೆ ಮಂಡಳಿಯ ಅನುಮತಿಯೂ ದೊರೆತಿದೆ. ಹೀಗಾಗಿ, ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಅನುದಾನದ ನಿರೀಕ್ಷೆ ಮಾಡಲಾಗಿತ್ತು ಎಂದು ರೈಲ್ಚೆ ಹೋರಾಟಗಾರರು ಹೇಳುತ್ತಾರೆ.

ಪಿಂಕ್ ಬುಕ್‌ನಲ್ಲಿ ಉಪನಗರ ರೈಲು ಯೋಜನೆಗಳ ವಿಷಯವೇ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ. ಹಣ ನೀಡದಿದ್ದರೆ ಯೋಜನೆಯ ಪ್ರಗತಿಗೆ ಹಿನ್ನಡೆಯಾಗಬಹುದು ಎಂದು ರೈಲ್ವೆ ಹೋರಾಟಗಾರ ಸಂಜೀವ್ ದ್ಯಾಮಣ್ಣನವರ ಹೇಳಿದರು.

‘ಪಿಂಕ್ ಬುಕ್ ಅಧಿಕೃತವಾಗಿ ಬುಧವಾರ ಬಿಡುಗಡೆಯಾಗಲಿದೆ. ಒಂದು ವೇಳೆ ಉಪನಗರ ರೈಲು ಯೋಜನೆಗಳ ವಿಷಯ ಅದರಲ್ಲಿ ಪ್ರಸ್ತಾಪ ಆಗದಿದ್ದರೂ ಭಯಪಡುವ ಅಗತ್ಯವಿಲ್ಲ. ಈ ಬಾರಿ ಮೆಟ್ರೊ ಪಾಲಿಟಿನ್ ಟ್ರಾನ್ಸ್‌ಪೋರ್ಟ್‌ ಪ್ರೋಗ್ರಾಮ್‌(ಎಂಟಿಪಿ) ಹೆಸರಿನಲ್ಲಿ ಪ್ರತ್ಯೇಕವಾಗಿ ಯೋಜನೆಗಳು ಮಾಹಿತಿ ಬಿಡುಗಡೆಯಾಗಲಿದೆ’ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದರು.

ಯಾವ ಯೋಜನೆಗೆ ಎಷ್ಟು ಹಣ

* ಮೈಸೂರಿನ ನಾಗನಹಳ್ಳಿ ಕೋಚಿಂಗ್ ಟರ್ಮಿನಲ್‌ಗೆ ₹20 ಕೋಟಿ

* ತಾಳಗುಪ್ಪ ಸಮೀಪದ ಕೋಟೆಗಂಗೂರು ಬಳಿ ಕೋಚಿಂಗ್ ಟರ್ಮಿನಲ್‌ಗೆ ₹12 ಕೋಟಿ

* ತುಮಕೂರು–ಹುಬ್ಬಳ್ಳಿ, ಚಿಕ್ಕಜಾಜೂರು– ಹೊಸಪೇಟೆ, ಹೊಸಪೇಟೆ–ಲೋಂಡ, ಯಲಹಂಕ– ಗುಂದಕಲ್, ಕಂಟೋನ್ಮೆಂಟ್– ವೈಟ್‌ಪೀಲ್ಡ್‌ ಜೋಡಿ ಮಾರ್ಗಕ್ಕೆ ₹1,318 ಕೋಟಿ

* ಕಡೂರು-ಸಕಲೇಶಪುರ, ಬಾಗಲಕೋಟೆ– ಕುಡಚಿ, ತುಮಕೂರು-ದಾವಣಗೆರೆ, ತುಮಕೂರು-ರಾಯದುರ್ಗ, ಗದಗ-ವಾಡಿ, ಗದಗ-ಎಲವಗಿ, ಬೆಳಗಾವಿ-ಕಿತ್ತೂರು-ಧಾರವಾಡ ಹೊಸ ಮಾರ್ಗಗಳಿಗೆ ₹1,256 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.