ಡಿ.ಕೆ. ಶಿವಕುಮಾರ್
ಬೆಂಗಳೂರು: 'ರೈಲ್ವೆ ಪರೀಕ್ಷೆಯಲ್ಲಿ ಮಂಗಳಸೂತ್ರ, ಜನಿವಾರ ತೆಗೆಯಬೇಕು ಎಂದು ಹೇಳಿರುವುದು ಸರಿಯಲ್ಲ. ಈ ಸೂಚನೆಯನ್ನು ಹಿಂಪಡೆಯಬೇಕು" ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, 'ಬಿಜೆಪಿಯವರು ಹೇಳುವುದು ಒಂದು ಮಾಡುವುದು ಇನ್ನೊಂದು. ಇದೇ ಅವರ ಮುಖವಾಡ' ಎಂದು ಟೀಕಿಸಿದರು.
'ಧಾರ್ಮಿಕ ಸಂಕೇತಗಳಾಗಿ ಓಲೆ, ಮೂಗೂತಿ, ಮಂಗಳಸೂತ್ರ, ಜನಿವಾರ, ಉಡುದಾರ, ಹಣೆಬೊಟ್ಟು ಇರುತ್ತದೆ. ಅವುಗಳನ್ನು ಪರಿಶೀಲನೆ ಮಾಡಲಿ. ಆದರೆ, ಅದನ್ನು ತೆಗೆಸುವುದು ಸರಿಯಲ್ಲ. ಈ ಹಿಂದೆ ಸಣ್ಣ, ಸಣ್ಣ ಉಪಕರಣಗಳನ್ನು ಬಳಸಿ ಪರೀಕ್ಷಾ ಅಕ್ರಮ ಎಸೆದ ಉದಾಹರಣೆಗಳನ್ನು ನೋಡಿದ್ದೇವೆ. ಇದರ ವಿರುದ್ಧ ಜನರೇ ಆಕ್ರೋಶ ವ್ಯಕ್ತಪಡಿಸಬೇಕು" ಎಂದರು.
ಬೆಲೆ ಏರಿಕೆಗೆ ಕೇಂದ್ರವೇ ಕಾರಣ:
'ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಜನಜಾಗೃತಿ ಮೂಡಿಸಿ ಹಾಗೂ ಸಂವಿಧಾನ ರಕ್ಷಣೆಗೆ ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ನಾನು, ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಭಾಗವಹಿಸುತ್ತಿದ್ದೇವೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಈ ಹೋರಾಟ ಮಾಡಲಿದ್ದೇವೆ" ಎಂದರು.
'ಬಿಜೆಪಿಯವರು ಕೇಂದ್ರದಲ್ಲಿ ಇರುವ ಅವರದೇ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಬೇಕು. ಏಕೆಂದರೆ ಅವರಿಂದಲೇ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದು. ನಾವು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.