ADVERTISEMENT

ರೈಲ್ವೆ ಮಾರ್ಗ | ರಾಜ್ಯದಿಂದ ಭೂಮಿ ಹಸ್ತಾಂತರ ವಿಳಂಬ: ಅಶ್ವಿನಿ ವೈಷ್ಣವ್‌

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2024, 23:30 IST
Last Updated 11 ಡಿಸೆಂಬರ್ 2024, 23:30 IST
<div class="paragraphs"><p>ಅಶ್ವಿನಿ ವೈಷ್ಣವ್‌</p></div>

ಅಶ್ವಿನಿ ವೈಷ್ಣವ್‌

   

–ಪಿಟಿಐ ಚಿತ್ರ

ನವದೆಹಲಿ: ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ನಡುವಿನ ರೈಲ್ವೆ ಮಾರ್ಗಕ್ಕೆ 555 ಹೆಕ್ಟೇರ್ ಜಾಗ ಬೇಕಿದೆ. ಆದರೆ, ಕರ್ನಾಟಕ ಸರ್ಕಾರವು ಈವರೆಗೆ 225 ಹೆಕ್ಟೇರ್‌ ಜಾಗವನ್ನಷ್ಟೇ ಹಸ್ತಾಂತರ ಮಾಡಿದೆ. ಭೂಮಿ ಹಸ್ತಾಂತರ ವಿಳಂಬದಿಂದ ಲಭ್ಯ ಇರುವ ಜಾಗದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದರು. 

ADVERTISEMENT

‌ಲೋಕಸಭೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಪ್ರಶ್ನೆಗೆ ಬುಧವಾರ ಉತ್ತರ ನೀಡಿರುವ ಸಚಿವರು, ‘103 ಕಿ.ಮೀ. ಉದ್ದದ ಮಾರ್ಗ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಉಚಿತವಾಗಿ ಭೂಮಿ ನೀಡಬೇಕಿದೆ ಹಾಗೂ ಶೇ 50ರಷ್ಟು ಯೋಜನಾ ಮೊತ್ತವನ್ನು ಭರಿಸಬೇಕಿದೆ. ರಾಜ್ಯ ಸರ್ಕಾರವು ತನ್ನ ಪಾಲಿನ ₹150 ಕೋಟಿ ಪಾವತಿ ಮಾಡಬೇಕಿದೆ. ಆದರೆ, ರಾಜ್ಯವು ₹60.26 ಕೋಟಿಯನ್ನಷ್ಟೇ ನೀಡಿದೆ. ಇದರ ನಡುವೆಯೇ, 2024–25ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಗೆ ₹150 ಕೋಟಿ ಅನುದಾನ ಒದಗಿಸಲಾಗಿದೆ’ ಎಂದು ಮಾಹಿತಿ ನೀಡಿದರು. 

ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ‘ತುಮಕೂರು–ಚಿತ್ರದುರ್ಗ–ದಾವಣಗೆರೆ ನಡುವಿನ 191 ಕಿ.ಮೀ. ಉದ್ದದ ನೂತನ ಮಾರ್ಗಕ್ಕೆ ₹359 ಕೋಟಿ ವೆಚ್ಚವಾಗಲಿದೆ. ಈ ಸಲದ ಬಜೆಟ್‌ನಲ್ಲಿ ₹150 ಕೋಟಿ ಒದಗಿಸಲಾಗಿದೆ. ಯೋಜನೆಗೆ 875 ಹೆಕ್ಟೇರ್ ಜಾಗ ಸ್ವಾಧೀನಪಡಿಸಿಕೊಳ್ಳಲಾಗಿದೆ. ಲಭ್ಯ ಇರುವ ಜಾಗದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದರು. 

ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಪ್ರಶ್ನೆಗೆ ಉತ್ತರಿಸಿರುವ ಅಶ್ವಿನಿ ವೈಷ್ಣವ್‌, ‘ಧಾರವಾಡ–ರಾಮದುರ್ಗ–ಸವದತ್ತಿ–ಲೋಕಾಪುರ ನಡುವೆ ನೂತನ ಮಾರ್ಗ ನಿರ್ಮಾಕ್ಕಾಗಿ ಸಮೀಕ್ಷೆ ನಡೆಸಲಾಗಿದೆ. ಈ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಇರಲಿದೆ ಎಂದು ಸಮೀಕ್ಷೆ ವರದಿ ತಿಳಿಸಿದೆ’ ಎಂದು ಮಾಹಿತಿ ನೀಡಿದರು. 

ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಪ್ರಶ್ನೆಗೆ ಉತ್ತರ ನೀಡಿ, ‘ಬೆಂಗಳೂರು–ಮಂಗಳೂರು ರೈಲು ಮಾರ್ಗವನ್ನು ಜೋಡಿ ಹಳಿಯನ್ನಾಗಿ ಪರಿವರ್ತಿಸಲು ಅಂತಿಮ ಸ್ಥಳ ಸಮೀಕ್ಷೆ ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರು–ತುಮಕೂರು ಮಾರ್ಗದ ಮೂರು ಹಾಗೂ ನಾಲ್ಕನೇ ಹಳಿಗಳ ನಿರ್ಮಾಣಕ್ಕೆ ಸಮೀಕ್ಷೆಗೆ ಮಂಜೂರಾತಿ ನೀಡಲಾಗಿದೆ’ ಎಂದು ತಿಳಿಸಿದರು. 

‘ಮಂಗಳೂರು–ಬೆಂಗಳೂರು ಬ್ರಾಡ್‌ಗೇಜ್‌ ಮಾರ್ಗವನ್ನು 2006ರಲ್ಲಿ ನಿರ್ಮಿಸಲಾಗಿದೆ. ಇದಕ್ಕೆ ಕರ್ನಾಟಕ ಸರ್ಕಾರ ದೊಡ್ಡ ಪಾಲು ನೀಡಿತ್ತು. ಇದಕ್ಕಾಗಿ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ಸ್ಥಾಪಿಸಲಾಗಿತ್ತು. ಈ ಘಟಕವು ಈಗ ಆರ್ಥಿಕವಾಗಿ ಸದೃಢವಾಗಿಲ್ಲ. ಹೀಗಾಗಿ, ಈ ಮಾರ್ಗವನ್ನು ರೈಲ್ವೆ ಸಚಿವಾಲಯವು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಉದ್ದೇಶಿಸಿದೆ. ಆಗ ಜೋಡಿ ಮಾರ್ಗ ನಿರ್ಮಾಣ, ವಿದ್ಯುದೀಕರಣ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದರು. 

ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, ‘ಬೆಂಗಳೂರು–ಸಕಲೇಶಪುರ ಹಾಗೂ ಮಂಗಳೂರಿನ ಪಡೀಲ್‌ನಿಂದ ಸುಬ್ರಹ್ಮಣ್ಯ ರಸ್ತೆ ವರೆಗೆ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಮಾರ್ಗದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದರು. 

‘ಸಕಲೇಶಪುರದಿಂದ ಸುಬ್ರಹ್ಮಣ್ಯ ರಸ್ತೆಗೆ ಪಶ್ಚಿಮ ಘಟ್ಟದ ಮೂಲಕ ರೈಲು ಹಾದು ಹೋಗುತ್ತಿದೆ. ಈ ಮಾರ್ಗ ಇಳಿಜಾರುಗಳನ್ನು ಹೊಂದಿದೆ. ಹೀಗಾಗಿ, ಈ ವಿಭಾಗದ ಸಾಮರ್ಥ್ಯ ಹೆಚ್ಚಿಸಲು ಎಡಕುಮೇರಿ–ಸಿರಿಬಾಗಿಲು ನಿಲ್ದಾಣದ ನಡುವಿನ ಹರೇಬೆಟ್ಟದಲ್ಲಿ ಕ್ರಾಸಿಂಗ್ ನಿಲ್ದಾಣ ಒದಗಿಸಲು ಕಾರ್ಯಸಾಧ್ಯತೆಯ ಅಧ್ಯಯನ ಕೈಗೊಳ್ಳಲಾಗಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.