ADVERTISEMENT

ಮುಂದುವರಿದ ಮಳೆ: ಗ್ರಾಮಗಳು ಜಲಾವೃತ

ಹೊಲ–ಗದ್ದೆಗಳಿಗೆ ನುಗ್ಗಿದ ನೀರು, ಅಪಾರ ಬೆಳೆ ಹಾನಿ l ಮನೆಗಳ ಕುಸಿತದಿಂದ ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 19:30 IST
Last Updated 8 ಜುಲೈ 2022, 19:30 IST
ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯದಿಂದ ಕಾಳಿ ನದಿಗೆ ಶುಕ್ರವಾರ 7,063 ಕ್ಯುಸೆಕ್ ನೀರನ್ನು ಹರಿಸಲಾಯಿತು
ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯದಿಂದ ಕಾಳಿ ನದಿಗೆ ಶುಕ್ರವಾರ 7,063 ಕ್ಯುಸೆಕ್ ನೀರನ್ನು ಹರಿಸಲಾಯಿತು   

ಬೆಂಗಳೂರು: ಉತ್ತರ ಕನ್ನಡದ ಕರಾ ವಳಿಯಲ್ಲಿ ಗುರುವಾರ ತಡರಾತ್ರಿಯಿಂದ ಶುಕ್ರವಾರ ಮಧ್ಯಾಹ್ನದ ತನಕ ನಿರಂ ತರವಾಗಿ ಧಾರಾಕಾರ ಮಳೆಯಾಗಿದೆ. ಇದರಿಂದ ವಿವಿಧೆಡೆ ಕೃಷಿ ಜಮೀನು, ಮನೆಗಳು, ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿವೆ.

ಹಾಸನ, ಕಲಬುರಗಿ, ಯಾದಗಿರಿ, ಬೀದರ್‌ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆ ಆಗಿದೆ. ಬೆಳ್ತಂಗಡಿ ತಾಲ್ಲೂಕಿನ ನೆರಿಯದಲ್ಲಿ ಗುಡ್ಡ ಕುಸಿದು 3 ಮನೆ ಗಳಿಗೆ ಹಾನಿಯಾಗಿದೆ. ಕೆಲವೆಡೆ ಕಡಲ್ಕೊರೆತ ಮುಂದುವರಿದಿದೆ.

ಉಡುಪಿ ಜಿಲ್ಲೆಯ ಶಿರೂರಿನಲ್ಲಿ 25.6 ಸೆಂ.ಮೀ, ಗೋಳಿಹೊಳೆಯಲ್ಲಿ 25.4 ಸೆಂ.ಮೀ ಮಳೆಯಾಗಿದೆ.

ADVERTISEMENT

ಹೊನ್ನಾವರದ ಗುಂಡಬಾಳ, ಭಾಸ್ಕೇರಿ, ಬಡಗಣಿ, ಭಟ್ಕಳದ ಮಣ್ಕುಳಿ ನಾಗಮಾಸ್ತಿಕೇರಿಯಲ್ಲಿ ಹಳ್ಳದ ನೀರು ಉಕ್ಕಿ ಹರಿದಿದೆ. ಸಮೀಪದ ಕೃಷಿ ಜಮೀನು, ಮನೆಗಳು ಜಲಾವೃತವಾಗಿವೆ. ನಾಟಿ ಮಾಡಿದ್ದ ಭತ್ತದ ಸಸಿಗಳು ಕೊಚ್ಚಿಕೊಂಡು ಹೋಗಿವೆ.

ಮುಂಡಗೋಡ ತಾಲ್ಲೂಕಿನಲ್ಲಿ 5 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಭಟ್ಕಳ ತಾಲ್ಲೂಕಿನ ಸರ್ಪನಕಟ್ಟೆ ಚೆಕ್‌ಪೋಸ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಒಂದು ಭಾಗದ ಮೇಲೆ ಗುಡ್ಡದ ಮಣ್ಣು ಕುಸಿದಿದೆ. ಕಾರವಾರ ತಾಲ್ಲೂಕಿನ ಬೇಳೂರು ಗ್ರಾಮದ ದಟ್ಟಾರಣ್ಯದ ನಡುವೆ ಸುಮಾರು ಮೂರು ಎಕರೆ ಪ್ರದೇಶದಲ್ಲಿ ಗುಡ್ಡ ಕುಸಿದಿದೆ.

ಮನೆ ಗೋಡೆಗಳ ಕುಸಿತ: ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪದ ಬೆಟಗೇರಿಯ ಹೆರವನಾಡು ಗ್ರಾಮ, ಕುಶಾಲನಗರ ತಾಲ್ಲೂಕಿನ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲುಕೊಪ್ಪಲು, ಸೋಮವಾರಪೇಟೆ ತಾಲ್ಲೂಕಿನ ರಾಮನಹಳ್ಳಿಯಲ್ಲಿ ಮನೆಗಳ ಗೋಡೆಗಳು ಕುಸಿದಿವೆ. ಮಡಿಕೇರಿ ನಗರದ ಹಾಕಿ ಮೈದಾನದ ಎದುರು ಎತ್ತರದ ಪ್ರದೇಶದಿಂದ ಮಣ್ಣು ಕುಸಿದಿದೆ.

ಡಿಸಿ ಕಚೇರಿಯ ತಡೆಗೋಡೆಯ ಕಾಂಕ್ರೀಟ್‌ ಸ್ಲ್ಯಾಬ್‌ಗಳು ಒಂದೆರಡು ಇಂಚಿನಷ್ಟು ಹೊರಬಂದಿದ್ದು, ಕುಸಿ ಯುವ ಭೀತಿ ಎದುರಾಗಿದೆ. ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು 14 ಸೆಂ.ಮೀ.ನಷ್ಟು ಮಳೆ ಮಡಿಕೇರಿ ಸಮೀಪದ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಮಳೆ ತುಸು ಹೆಚ್ಚಾಗಿದ್ದು, ಹಾನುಬಾಳು ಸಮೀಪ ದೋಣಹಳ್ಳಿ ಗ್ರಾಮದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.