ADVERTISEMENT

ಮಳೆ: ಬಾಳೆ, ದ್ರಾಕ್ಷಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 11:24 IST
Last Updated 19 ಏಪ್ರಿಲ್ 2020, 11:24 IST
ಸವದತ್ತಿ ತಾಲ್ಲೂಕಿನ ಸುತಗಟ್ಟಿ ಗ್ರಾಮದಲ್ಲಿ ಮಳೆಯಿಂದ ಬಾಳೆ ಗಿಡಗಳು ನೆಲಕ್ಕುರುಳಿವೆ
ಸವದತ್ತಿ ತಾಲ್ಲೂಕಿನ ಸುತಗಟ್ಟಿ ಗ್ರಾಮದಲ್ಲಿ ಮಳೆಯಿಂದ ಬಾಳೆ ಗಿಡಗಳು ನೆಲಕ್ಕುರುಳಿವೆ   
""

ಸವದತ್ತಿ: ಶನಿವಾರ ರಾತ್ರಿ ಭಾರಿ ಮಳೆ–ಗಾಳಿಯಿಂದ ಸುತಗಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಟ್ಟಣಗಿ, ಏಣಗಿ, ಗೊಮ್ಮಗುಂಡಿಕೊಪ್ಪ, ಗೋವನಕೊಪ್ಪ ಕೆ.ವೈ. ಗ್ರಾಮಗಳಲ್ಲಿ ಬಾಳೆ ಸೇರಿದಂತೆ ಇತರ ಬೆಳೆಗಳು ಧರೆಗುರುಳಿ ರೈತನನ್ನು ಸಂಕಷ್ಟಕ್ಕೀಡುಮಾಡಿದೆ.

ಸುತಗಟ್ಟಿಯ ರಮೇಶ ಉದ್ದಪ್ಪ ಪೂಜಾರಿ 2 ಎಕರೆ ಹೊಲದಲ್ಲಿ 1600 ಬಾಳೆ ಗಿಡ ಬೆಳೆದಿದ್ದರು. ಮಳೆಯಿಂದ 450ಕ್ಕೂ ಹೆಚ್ಚಿನ ಗಿಡಗಳು ನೆಲಕ್ಕುರುಳಿ ಅಪಾರ ಹಾನಿ ಸಂಭವಿಸಿದೆ. ಅಧಿಕಾರಿಗಳು ವೀಕ್ಷಿಸಿ, ಮಾಹಿತಿ ‍ಪಡೆದರು.

‘ತಾಲ್ಲೂಕಿನಾದ್ಯಂತ ಪರಿಶೀಲನೆ ನಡೆಸಿದ್ದೇವೆ. ಮಳೆಯಿಂದಾದ ಹಾನಿಯ ವರದಿ ತಯಾರಿಸಿ ಇನ್ನೆರಡು ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಉಮೇಶ ಕಾಳಿ ತಿಳಿಸಿದರು.

ADVERTISEMENT

ದ್ರಾಕ್ಷಿ ಬೆಳೆಗಾರರಿಗೆ ಸಂಕಷ್ಟ
ತೆಲಸಂಗ:
ಶನಿವಾರ ರಾತ್ರಿ ಆಲಿಕಲ್ಲು ಮಳೆಯಿದಾಗಿ ಒಣದ್ರಾಕ್ಷಿ ತೋಯ್ದು ಹಾಳಾಗಿದೆ. ಕೆಲವೆಡೆ ದ್ರಾಕ್ಷಿ ತೋಟಗಳ ಕಂಬಗಳು ಮುರಿದು ಬಿದ್ದು ಅಪಾರ ಹಾನಿ ಸಂಭವಿಸಿದೆ.

ಶನಿವಾರ ಸಂಜೆ ಮತ್ತು ರಾತ್ರಿ ಎರಡು ಬಾರಿ ಆಲಿಕಲ್ಲು ಮಳೆ ಸುರಿದಿದೆ. ಲಾಕ್‌ಡೌನ್‌ ಪರಿಣಾಮ, ಮಾರಾಟ ಮಾಡಲಾಗದೆ ಉಳಿದ ದ್ರಾಕ್ಷಿಯನ್ನು ರೈತರು ಒಣ ದ್ರಾಕ್ಷಿ ಮಾಡುತ್ತಿದ್ದಾರೆ. ಶೆಡ್‌ಗಳಿಗೆ ಹಾಕಿದ್ದ ಪ್ಲಾಸ್ಟಿಕ್ ಭಾರಿ ಗಾಳಿಗೆ ಹರಿದುಹೋಗಿದ್ದರಿಂದ ದ್ರಾಕ್ಷಿಗೆ ನೀರು ಬಿದ್ದು ನಷ್ಟವಾಗಿದೆ ಎಂದು ರೈತರು ತಿಳಿಸಿದ್ದಾರೆ.

‘ನಮ್ಮ ಮೂರೂವರೆ ಎಕರೆ ದ್ರಾಕ್ಷಿ ಸಂಪೂರ್ಣ ಹಾಳಾಗಿದೆ. ಗಾಳಿಗೆ ಕಂಬಗಳು ಬಿದ್ದಿವೆ. ಒಣ ದ್ರಾಕ್ಷಿ ಹಾಳಾಗಿದೆ. ಆಲಿಕಲ್ಲು ಹೊಡೆತಕ್ಕೆ
ದ್ರಾಕ್ಷಿಗೊನೆಗಳು ಒಡೆದಿವೆ. ಪ್ರಸಕ್ತ ವರ್ಷ ಕೊರೊನಾ ಹೊಡೆತದಿಂದ ನಷ್ಟ ಅನುಭವಿಸಿದ್ದೆವು. ಈಗ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ’ ಎಂದು ಬನ್ನೂರ ಗ್ರಾಮದ ರೈತ ಸುನೀಲ ಪೂಜಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.