ADVERTISEMENT

ಭಾರಿ ಮಳೆಯಿಂದ ಹಳಿಗೆ ಹಾನಿ: ರೈಲು ಸಂಚಾರದಲ್ಲಿ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 5:34 IST
Last Updated 2 ಆಗಸ್ಟ್ 2022, 5:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕಾರವಾರ: ರಾಜ್ಯದ ಕರಾವಳಿಯಲ್ಲಿ ಮಂಗಳವಾರ ಭಾರಿ ಮಳೆಯಿಂದಾಗಿ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಕೊಂಕಣ ರೈಲ್ವೆಯು ಒಂದು ರೈಲಿನ ಸಂಚಾರವನ್ನು ರದ್ದು ಮಾಡಿದೆ. ಮತ್ತೊಂದು ರೈಲಿನ ಸಂಚಾರ ಮೊಟಕುಗೊಂಡಿದ್ದರೆ, ಮತ್ತೆ ಕೆಲವು ವೇಳಾಪಟ್ಟಿ ಪರಿಷ್ಕರಣೆಗೊಳಿಸಲಾಗಿದೆ.

ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಮತ್ತು ಭಟ್ಕಳ ನಿಲ್ದಾಣ ನಡುವೆ ಹಳಿಗಳು ಸಂಪೂರ್ಣವಾಗಿ ಮುಳುಗಿವೆ.

ಮೊಟಕುಗೊಂಡ ಸಂಚಾರ: ಮಂಗಳೂರು- ಮಡಗಾಂವ್ ವಿಶೇಷ ರೈಲಿನ (06602) ಸಂಚಾರವನ್ನು ಉಡುಪಿ ನಿಲ್ದಾಣದಲ್ಲಿ ಮೊಟಕುಗೊಳಿಸಲಾಗಿದೆ.

ADVERTISEMENT

ಸಂಚಾರ ರದ್ದು:ಮಡಗಾಂವ್- ಮಂಗಳೂರು ಸ್ಪೆಷಲ್ ರೈಲು (06601) ಸಂಚಾರವನ್ನು ಸಂಪೂರ್ಣ ರದ್ದು ಪಡಿಸಲಾಗಿದೆ.

ಸಮಯ ಬದಲಾವಣೆ:ಎರ್ನಾಕುಲಂ- ಪುಣೆ ನಡುವಿನ ಎಕ್ಸ್‌ಪ್ರೆಸ್ (11098) ರೈಲನ್ನು ಭಟ್ಕಳ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದೆ. ಬೆಂಗಳೂರು- ಕಾರವಾರ ಎಕ್ಸ್‌ಪ್ರೆಸ್ (16595) ರೈಲು ಶಿರೂರು ನಿಲ್ದಾಣದಲ್ಲಿ ನಿಂತಿದೆ. ಕಾರವಾರ - ಯಶವಂತಪುರ ಎಕ್ಸ್‌ಪ್ರೆಸ್ ರೈಲನ್ನು ಹೊನ್ನಾವರ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದೆ. ಉಳಿದಂತೆ, ಸೇನಾಪುರ, ಅಂಕೋಲಾ ನಿಲ್ದಾಣಗಳಲ್ಲೂ ತಲಾ ಒಂದು ರೈಲನ್ನು ನಿಲ್ಲಿಸಲಾಗಿದೆ.

ಹಾನಿಯಾದ ಹಳಿಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಮಧ್ಯಾಹ್ನ 12ರ ವೇಳೆಗೆ ರೈಲುಗಳ ಸಂಚಾರ ಆರಂಭವಾಗುವ ಸಾಧ್ಯತೆಯಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.