ADVERTISEMENT

ಕೊಡಗು, ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಳೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 1:28 IST
Last Updated 10 ಜೂನ್ 2019, 1:28 IST
ಮಡಿಕೇರಿ ತಾಲ್ಲೂಕಿನ ಭಾಗಮಂಡಲದಲ್ಲಿ ಭಾನುವಾರ ಮಳೆ ಸುರಿಯಿತು
ಮಡಿಕೇರಿ ತಾಲ್ಲೂಕಿನ ಭಾಗಮಂಡಲದಲ್ಲಿ ಭಾನುವಾರ ಮಳೆ ಸುರಿಯಿತು   

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಭಾನುವಾರ ಮಳೆಯಾಗಿದೆ.

ಭಾಗಮಂಡಲ, ತಲಕಾವೇರಿ, ಚೇರಂಬಾಣೆಯ ಸುತ್ತಮುತ್ತ ಜೋರು ಮಳೆಯಾಯಿತು. ಮಡಿಕೇರಿ, ಅಪ್ಪಂಗಳ, ತಾಳತ್ತಮನೆ, ಶನಿವಾರಸಂತೆ, ಸೋಮವಾರಪೇಟೆ, ಪೊನ್ನಂಪೇಟೆ, ಗೋಣಿಕೊಪ್ಪಲು ಭಾಗದ ಅಲ್ಲಲ್ಲಿ ಗುಡುಗು ಸಹಿತ ಮಳೆ ಬಂತು. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ಉತ್ತಮ ಮಳೆ ಸುರಿಯಿತು. ಇಡೀ ದಿನ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ 3 ಗಂಟೆಯ ನಂತರ ದಟ್ಟ ಮೋಡಗಳು ಜಮಾಯಿಸಿ ಸಂಜೆ 4ರ ಸಮಯಕ್ಕೆ ವರ್ಷಧಾರೆಯಾಯಿತು. ಪುನಃ ಬಿಡುವು ನೀಡಿ 5.30ರಿಂದ ಮಳೆ ಸುರಿಯುತ್ತಲೇ ಇತ್ತು.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ತುಂತುರು ಮಳೆಯಾಗಿದೆ.

ADVERTISEMENT

ಹನೂರು ಬಳಿ ಕಾಮಗೆರೆ, ಸಿಂಗನಲ್ಲೂರು ಮತ್ತು ದೊಡ್ಡಿಂದುವಾಡಿಯಲ್ಲಿ ಅರ್ಧ ಗಂಟೆ ಮಳೆಯಾಯಿತು. ಶಿವಮೊಗ್ಗ ಜಿಲ್ಲೆಯ ಹಲವೆಡೆ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಿದೆ. ಶಿವಮೊಗ್ಗ ನಗರ ಹಾಗೂ ಸುತ್ತಮುತ್ತ, ಸಾಗರ, ಭದ್ರಾವತಿ ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಗಿದೆ. ತೀರ್ಥಹಳ್ಳಿ ತಾಲ್ಲೂಕು ಬೆಜ್ಜವಳ್ಳಿ, ಮಾಳೂರು, ಕೋಣಂದೂರು ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಸೊರಬ, ಹೊಸನಗರ, ಆನಂದಪುರದಲ್ಲಿ ಮೋಡ ಕವಿದ ವಾತಾವರಣವಿತ್ತು.

ಸಿಡಿಲು ಬಡಿದು ಸಾವು: ಕೋಣಂದೂರು ಸಮೀಪದ ಯೋಗಿಮಳಲಿ ಗ್ರಾಮದಲ್ಲಿ ಸಿಡಿಲು ಬಡಿದು ವೆಂಕಟೇಶ್ (47) ಎಂಬುವವರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.