ADVERTISEMENT

ಹುಬ್ಬಳ್ಳಿ–ಬೆಳಗಾವಿಯಲ್ಲಿ ಮಳೆ: ಮಲಪ್ರಭಾ, ಮಹದಾಯಿ ನದಿಗಳಿಗೆ ಕಳೆ

ರಾಜ್ಯದಲ್ಲಿ ಹಲವೆಡೆ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 17:10 IST
Last Updated 30 ಜೂನ್ 2019, 17:10 IST
ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಜಾಂಬೋಟಿ ಅರಣ್ಯದಲ್ಲಿರುವ ಹಬ್ಬನಹಟ್ಟಿ ಆಂಜನೇಯ ದೇವಾಲಯದ ಬಳಿ ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿದೆ.
ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಜಾಂಬೋಟಿ ಅರಣ್ಯದಲ್ಲಿರುವ ಹಬ್ಬನಹಟ್ಟಿ ಆಂಜನೇಯ ದೇವಾಲಯದ ಬಳಿ ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿದೆ.   

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಇನ್ನಷ್ಟು ಚುರುಕಾಗಿದೆ. ಭಾನುವಾರ ಹಲವೆಡೆ ಉತ್ತಮ ಮಳೆ ಬಿದ್ದಿದೆ. ಇದರಿಂದ ಕೃಷಿ ಚಟುವಟಿಕೆ ಇನ್ನಷ್ಟು ಬಿರುಸಾಗಿದೆ.

ಬೆಳಗಾವಿ ನಗರವೂ ಸೇರಿದಂತೆ, ಹುಬ್ಬಳ್ಳಿ– ಧಾರವಾಡದಲ್ಲಿ ಭಾನುವಾರವೂ ಮಳೆ ಮುಂದುವರಿಯಿತು. ಇಡೀ ದಿನ ಬಿಡುವಿಲ್ಲದಂತೆ ಸುರಿದ ಮಳೆಯಿಂದಾಗಿ ರಸ್ತೆ, ದೇಗುಲ ಜಲಾವೃತವಾದರೆ, ಮನೆಗೆ ನೀರು ನುಗ್ಗಿ ಜನರಿಗೆ ಅನಾನುಕೂಲವಾಯಿತು.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಜಾಂಬೋಟಿ ಅರಣ್ಯದಲ್ಲಿರುವ ಹಬ್ಬನಹಟ್ಟಿ ಆಂಜನೇಯ ದೇವಾಲಯದ ಬಳಿ ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿದೆ. ದೇಗುಲ ಸಂಪೂರ್ಣ ಜಲಾವೃತವಾಗಿದೆ. ಕಣಕುಂಬಿ ಪ್ರದೇಶದಲ್ಲಿ 18 ಸೆಂ.ಮೀ. ಮಳೆ ದಾಖಲಾಗಿದೆ. ಮಲಪ್ರಭಾ, ಮಹದಾಯಿ ನದಿಗಳು ಜೀವಕಳೆ ಪಡೆದಿವೆ.

ADVERTISEMENT

ನಂದಗಡ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಸಂಗೊಳ್ಳಿರಾಯಣ್ಣ ಕೆರೆ ಬಳಿಯ ಸೇತುವೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ.ನಗರದ ಜಿಲ್ಲಾಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿರುವ ನೋಂದಣಿ ಸ್ಥಳಕ್ಕೆ ನೀರು ನುಗ್ಗಿತ್ತು. ಮಾರುತಿನಗರ, ಬಿ.ಕೆ. ಕಂಗ್ರಾಳಿಯಲ್ಲಿ ಮನೆಗಳಿಗೆ ನೀರು ನುಗ್ಗಿತ್ತು.

ಧರೆಗುರುಳಿದ ಮರ, ಗೋಡೆ ಕುಸಿತ:ಹುಬ್ಬಳ್ಳಿಯ ಬಮ್ಮಾಪುರ ಚೌಕದಲ್ಲಿ ಎರಡು ಮನೆಗಳ ಗೋಡೆ ಕುಸಿದು ಬಿದ್ದಿವೆ. ಮರ ಬಿದ್ದು ಆಟೊ ಜಖಂಗೊಂಡಿದೆ. ಹೊಸದಾಗಿ ಆರಂಭಿಸಿರುವ ಬಿಆರ್‌ಟಿಎಸ್‌ ರಸ್ತೆಗೆ ಚರಂಡಿ ನೀರು ನುಗ್ಗಿತ್ತು.

ವಾಣಿಜ್ಯ ನಗರಿಯಲ್ಲಿ ಭಾನುವಾರ 32.22 ಮಿ.ಮೀ. ಮಳೆಯಾದರೆ, ಧಾರವಾಡ ತಾಲ್ಲೂಕಿನಲ್ಲಿ 45.65 ಮಿ.ಮೀ. ಮಳೆ ಸುರಿದಿದೆ. ಧಾರವಾಡದ ಜನ್ನತನಗರದಲ್ಲೂ ಒಂದು ಆಟೊ ಮೇಲೆ ಎರಡು ವಿದ್ಯುತ್‌ ಕಂಬ ಉರುಳಿವೆ.

ಮಳೆಯಾದರೂ ಜಲಾಶಯಕ್ಕೆ ನೀರಿಲ್ಲ: ಬಳ್ಳಾರಿ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯಾಗಿದ್ದು, ಕುಂಠಿತಗೊಂಡಿದ್ದ ಬಿತ್ತನೆ ಕೆಲಸ ಚುರುಕುಗೊಂಡಿದೆ.

ಶನಿವಾರ ರಾತ್ರಿ, ಭಾನುವಾರ ಬೆಳಿಗ್ಗೆ ನಗರ, ತಾಲ್ಲೂಕಿನ ಮರಿಯಮ್ಮನಹಳ್ಳಿ, ಜಿಲ್ಲೆಯ ಕೂಡ್ಲಿಗಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಸಂಡೂರು, ಕಂಪ್ಲಿ, ಕುರುಗೋಡು ಸುತ್ತಮುತ್ತ ಮಳೆಯಾಗಿದೆ.

ಭಾನುವಾರ ಬೆಳಿಗ್ಗೆ ಜಿಟಿಜಿಟಿ ಮಳೆಯಾಗಿದ್ದು, ದಿನವಿಡೀ ಕಾರ್ಮೋಡ ಕವಿದಿತ್ತು. ಎರಡು ಮೂರು ದಿನಗಳಿಂದ ಜಿಲ್ಲೆಯಾದ್ಯಂತ ವರ್ಷಧಾರೆ ಆಗುತ್ತಿರುವ ಕಾರಣ ರೈತರ ಸಂತಸಕ್ಕೆ ಕಾರಣವಾಗಿದೆ. ಎಲ್ಲೆಡೆ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಆದರೆ, ಜಲಾನಯನ ಪ್ರದೇಶದಲ್ಲಿ ಹೇಳಿಕೊಳ್ಳುವಂತಹ ಮಳೆಯಾಗದ ಕಾರಣ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬರುತ್ತಿಲ್ಲ. ಇದು ಅಚ್ಚುಕಟ್ಟು ಪ್ರದೇಶದ ರೈತರ ಚಿಂತೆಗೆ ಕಾರಣವಾಗಿದೆ.

ಮಡಿಕೇರಿಯಲ್ಲಿ ಮಳೆ‌: ಕೊಡಗು‌ ಜಿಲ್ಲೆಯ ಭಾಗಮಂಡಲ, ತಲಕಾವೇರಿ, ನಾಪೋಕ್ಲು‌ ಹಾಗೂ ಚೇರಂಬಾಣೆಯ ಸುತ್ತಮುತ್ತ ಭಾನುವಾರ ಉತ್ತಮ ಮಳೆಯಾಗಿದೆ.

ರೈತರ ಮುಖದಲ್ಲಿ ಮಂದಹಾಸ:ಯಾದಗಿರಿಯಲ್ಲಿ ಭಾನುವಾರ ಉತ್ತಮ ಮಳೆಯಾಯಿತು. ಜಿಲ್ಲೆಯ ಶಹಾಪುರ, ಸುರಪುರ ಮತ್ತು ಗುರುಮಠಕಲ್ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕಲಬುರ್ಗಿಯಲ್ಲಿ ಮೂರು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಭಾನುವಾರ ಸಂಜೆ ಕೆಲ ಹೊತ್ತು ಮಳೆಯಾಯಿತು.

ಶಿವಮೊಗ್ಗ, ದಾವಣಗೆರೆಯಲ್ಲಿ ಉತ್ತಮ ಮಳೆ: ಮಲೆನಾಡಿನಲ್ಲಿ ಆರಿದ್ರಾ ಮಳೆ ಅಬ್ಬರ ಜೋರಾಗಿದೆ. ಭಾನುವಾರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ.

ಶನಿವಾರ ರಾತ್ರಿಯಿಂದಲೂ ಉತ್ತಮ ಮಳೆಯಾಗುತ್ತಿದ್ದು, ತುಂಗೆಯಲ್ಲಿ ಒಳಹರಿವು ಹೆಚ್ಚಾಗಿದೆ.

ಸಾಗರದಲ್ಲಿ ಬಿರುಸಿನ ಮಳೆ
ಯಾಗಿದೆ. ತೀರ್ಥಹಳ್ಳಿಯಲ್ಲಿ 62.4 ಮಿ.ಮೀ., ಭದ್ರಾವತಿ 18 ಮಿ.ಮೀ., ಶಿವಮೊಗ್ಗ 18.6 ಮಿ.ಮೀ., ಸೊರಬ33 ಮಿ.ಮೀ., ಶಿಕಾರಿಪುರ 17 ಮಿ.ಮೀ., ಹೊಸನಗರ 41.6 ಮಿ.ಮೀ. ಮಳೆಯಾಗಿದೆ.

ಮನೆ ಮುಂದೆ ನೀರು: ಶನಿವಾರ ರಾತ್ರಿ ಮತ್ತು ಭಾನುವಾರ ದಾವಣಗೆರೆಯಲ್ಲಿ ಉತ್ತಮ ಮಳೆಯಾಗಿದೆ. ಬೇತೂರಿ
ನಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ನೀರು ಹರಿಯಲು ಅಡ್ಡಿಯಾಗಿ ಕೆಲವು ಮನೆಗಳ ಮುಂದೆ ನೀರು ನಿಂತಿತ್ತು. ಚನ್ನಗಿರಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಯನ್ನು ಚುರುಕುಗೊಳಿಸಿದ್ದಾರೆ.ಚಿತ್ರದುರ್ಗದ ಹೊಸದುರ್ಗ ಪಟ್ಟಣ ಸೇರಿ ತಾಲ್ಲೂಕಿನ ವಿವಿಧೆಡೆ ಭಾನುವಾರ ಮಳೆಯಾಗಿದೆ.

ಮಲೆನಾಡಿನಲ್ಲಿ ಸಾಧಾರಣ ಮಳೆ

ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾನುವಾರ ಸಾಧಾರಣ ಮಳೆ ಸುರಿದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬಿಟ್ಟು, ಬಿಟ್ಟು ಮಳೆ ಸುರಿಯುತ್ತಿದ್ದು, ನಿರಂತರ ಮಳೆ ಆಗದೇ ಕೃಷಿಕರು ಆತಂಕಕ್ಕೆ ಒಳಗಾಗಿದ್ದಾರೆ.

ಮಂಗಳೂರಿನಲ್ಲಿ ಬೆಳಿಗ್ಗೆಯಿಂದ 3–4 ಬಾರಿ ರಭಸದ ಮಳೆ ಸುರಿದಿದೆ. ಉಡುಪಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಬೆಳ್ಳಿಗೆಯಿಂದ ತುಂತುರು ಮಳೆ ಸುರಿಯಿತು. ಗಿರಿಶ್ರೇಣಿಯ ಕೈಮರ, ಅತ್ತಿಗುಂಡಿ, ಕವಿಕಲ್ಗಂಡಿ ಸುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿದೆ.

ಮಲೆನಾಡಿನ ಮೂಡಿಗೆರೆ, ಕೊಪ್ಪ, ಎನ್‌.ಆರ್‌.ಪುರ, ಶೃಂಗೇರಿ ಭಾಗದಲ್ಲಿ ಶನಿವಾರ ರಾತ್ರಿಯಿಂದ ಬಿಟ್ಟು ಬಿಟ್ಟು ಸಾಧಾರಣ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.