ADVERTISEMENT

ಮಳೆಯಿಂದ ಸತ್ತವರ ಕುಟುಂಬಕ್ಕೆ ತಲಾ ₹ 5 ಲಕ್ಷ ಪರಿಹಾರ ಘೋಷಣೆ ಮಾಡಿದ ಸಿಎಂ

​ಪ್ರಜಾವಾಣಿ ವಾರ್ತೆ
Published 18 ಮೇ 2022, 12:26 IST
Last Updated 18 ಮೇ 2022, 12:26 IST
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಸಿಎಂ ಬಸವರಾಜ ಬೊಮ್ಮಾಯಿ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಸಿಎಂ ಬಸವರಾಜ ಬೊಮ್ಮಾಯಿ.   

ಬೆಂಗಳೂರು:ಮಳೆಯಿಂದಾಗಿ ಸತ್ತವರ ಕುಟುಂಬಕ್ಕೆ ತಲಾ ₹ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಆದವರಿಗೆ ತಲಾ ₹ 25 ಸಾವಿರ ಪರಿಹಾರ ನೀಡುತ್ತೇವೆ. ಸಂತ್ರಸ್ತರಿಗೆ ಊಟಕ್ಕೂ ವ್ಯವಸ್ಥೆ ಕಲ್ಪಿಸಲು ಸೂಚಿಸಿರುವುದಾಗಿ ತಿಳಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಮಳೆಯಿಂದ ಪದೇ ಪದೇ ಅನಾಹುತ ಸಂಭವಿಸುವುದನ್ನು ತಡೆಯಲು ₹ 600 ಕೋಟಿ ಮೊತ್ತದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ADVERTISEMENT

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಹೊಸಕೆರೆಹಳ್ಳಿ ವಾರ್ಡ್ನ ದತ್ತಾತ್ರೇಯ ನಗರ ಹಾಗೂ ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಐಡಿಯಲ್ ಬಡಾವಣೆಯಲ್ಲಿ ಮಳೆಯಿಂದ ಸಮಸ್ಯೆ ಉಂಟಾದ ಪ್ರದೇಶಗಳಲ್ಲಿ ಅವರು ಸಂತ್ರಸ್ತರ ಅಹವಾಲು ಆಲಿಸಿದರು.

ಮಳೆಯಿಂದ ಬದುಕೇ ನಾಶವಾಗಿದೆ‌. ನಮಗೆ ಶಾಶ್ವತ ಪರಿಹಾರ ಬೇಕು‌. ಸರ್ವಸ್ವವನ್ನೂ ಕಳೆದುಕೊಂಡಿದ್ದೇವೆ ಎಂದು ಸಂತ್ರಸ್ತರು ಅಳಲು ತೋಡಿ ಕೊಂಡರು.

ಮೂರು ವಿಧದ ಕಾಮಗಾರಿಗಳು ನಡೆಸಬೇಕಿದೆ. ಪ್ರಮುಖ ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯಲು ಇರುವ ಅಡ್ಡಿ ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

'ತಗ್ಗು ಪ್ರದೇಶಗಳಲ್ಲಿ ಮಳೆ ಜಾಸ್ತಿ ಆದಾಗ ಪದೇ ಪದೇ ಮನೆಗಳಿಗೆ ನೀರುನುಗ್ಗುತ್ತಿದೆ‌. ಕಾಲುವೆ ಪಕ್ಕದಲ್ಲೇ ಮನೆ ಕಟ್ಟಿಕೊಂಡಿದ್ದಾರೆ. ಇದಕ್ಕೂ ಪರಿಹಾರ ಕಂಡುಕೊಳ್ಳಬೇಕಿದೆ‌' ಎಂದರು.

'ಹೊಸಕೆರೆ ಹಳ್ಳಿ ಪ್ರದೇಶದಲ್ಲಿ ಹಿಂದೆ ಇಡಿ ಪ್ರದೇಶದಲ್ಲಿ ನೀರು ನುಗ್ಗುತ್ತಿತ್ತು. ಈಗ ಕೆಲವು ಕಾಲುವೆ ದುರಸ್ತಿ ಪಡಿಸಿದ್ದರಿಂದ 20 ಮನೆಗಳಿಗೆ ಮಾತ್ರ ನೀರುನುಗ್ಗಿದೆ ಎಂದರು.

ನಗರದಲ್ಲಿ ರಾಜಕಾಲುವೆ 800 ಕಿ.ಮೀ. ಇದೆ. 400 ಕಿ.ಮೀ ಮಾತ್ರ ಅಭಿವೃದ್ಧಿ ಆಗಿದೆ. ಇನ್ನುಳಿದ 400 ಕಿ.ಮೀ ರಾಜಕಾಲುವೆ ಅಭಿವೃದ್ಧಿಗೆ 1,500 ಕೋಟಿಯ ಯೋಜನೆ ರೂಪಿಸಲಾಗಿದೆ ಎಂದರು.

ಸಚಿವರಾದ ಆರ್.ಅಶೋಕ್, ಮುನಿರತ್ನ, ಶಾಸಕರಾದ ಸಿ.ಟಿ ರವಿ, ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ದಕ್ಣಿಣ ವಲಯ ಆಯುಕ್ತರಾದ ತುಳಸಿ ಮದ್ದಿನೇನಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.