ADVERTISEMENT

ಊರೆಲ್ಲ ನೀರು: ಪರಿಹಾರದ್ದೇ ಗೋಳು

ಸಾವಿನ ಸಂಖ್ಯೆ 26ಕ್ಕೆ ಏರಿಕೆ * ಹೆಲಿಕಾಪ್ಟರ್‌ಗಳ ಮೂಲಕ ಸಂತ್ರಸ್ತರ ಏರ್‌ಲಿಫ್ಟ್‌ * 2.56 ಲಕ್ಷ ಹೆಕ್ಟೇರ್‌ ಜಮೀನಿನಲ್ಲಿದ್ದ ಬೆಳೆ ಹಾನಿ l

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2019, 2:24 IST
Last Updated 10 ಆಗಸ್ಟ್ 2019, 2:24 IST
ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಉದಗಟ್ಟಿ ಗ್ರಾಮದ ಪ್ರವಾಹ ಪೀಡಿತ ಪ್ರದೇಶದಲ್ಲಿ ಸೇನಾ ಸಿಬ್ಬಂದಿ ಶುಕ್ರವಾರ ರಕ್ಷಣಾ ಕಾರ್ಯಾಚರಣೆ ನಡೆಸಿದರು
ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಉದಗಟ್ಟಿ ಗ್ರಾಮದ ಪ್ರವಾಹ ಪೀಡಿತ ಪ್ರದೇಶದಲ್ಲಿ ಸೇನಾ ಸಿಬ್ಬಂದಿ ಶುಕ್ರವಾರ ರಕ್ಷಣಾ ಕಾರ್ಯಾಚರಣೆ ನಡೆಸಿದರು   

ಬೆಂಗಳೂರು: ಜೀವ ನದಿಗಳ ಆಕ್ರೋಶ, ಆರ್ಭಟ, ರೌದ್ರತೆಗೆ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ. ಸರ್ವಸ್ವವನ್ನು ಕಳೆದುಕೊಂಡಿರುವ ಅಸಂಖ್ಯಾತ ಜನರು ನೀರು, ಆಹಾರ, ಆಶ್ರಯಕ್ಕಾಗಿ ಕಣ್ಣೀರಿಡುತ್ತಿದ್ದಾರೆ. ಸಹಸ್ರಾರು ಸಂತ್ರಸ್ತರು ಪ್ರಾಣ ಉಳಿಸಿಕೊಳ್ಳಲು ಸಿಕ್ಕ ಸಿಕ್ಕ ವಾಹನಗಳಲ್ಲಿ ಸುರಕ್ಷಿತ ಎತ್ತರದ ಪ್ರದೇಶಗಳಿಗೆ ಗುಳೇ ಹೋಗುತ್ತಿದ್ದಾರೆ.

ಪ್ರವಾಹ ಪೀಡಿತ ಎಲ್ಲ ಜಿಲ್ಲೆಗಳಲ್ಲೂ ‘ಜಲ ತಾಂಡವ’ದ ಪರಿಣಾಮ ಒಂದೇ ಆಗಿದೆ. ನೋವು, ಹಸಿವು, ನೀರಡಿಕೆಯಿಂದ ಜನ ಕಂಗಾಲಾಗಿದ್ದಾರೆ. ಮನೆಗೆ ಆಧಾರವಾಗಿದ್ದವರನ್ನು ಕಳೆದು ಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದು, ವರುಣನ ಆರ್ಭಟ ಇನ್ನಷ್ಟು ಬಿರುಸಾಗಿದೆ. ಪಶ್ಚಿಮಘಟ್ಟಗಳ ಸಾಲಿನಲ್ಲಿ ಎಡೆಬಿಡದ ‘ವರುಣ ಸ್ಫೋಟ’ ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಪ್ರತಿಕೂಲ ಸನ್ನಿವೇಶದಲ್ಲೂ ಸಂತ್ರಸ್ತರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.

ಭೂಕುಸಿತ ಮತ್ತು ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆಯೂ ಏರಿಕೆಯಾಗಿದೆ. ಕೊಡಗಿನಲ್ಲಿ ಭೂಕುಸಿತ ದಿಂದ ಏಳು ಮಂದಿ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದರೆ, ಎಂಟು ಮಂದಿ ಕಣ್ಮರೆಯಾಗಿದ್ದಾರೆ. ಇದರಿಂದಾಗಿ, ಪ್ರವಾಹ–ಮಳೆಯಿಂದ ಸಾವಿಗೀಡಾದವರ ಸಂಖ್ಯೆ 26 ಕ್ಕೆ ಏರಿದೆ.

ಪರಿಹಾರಕ್ಕೆ ತೊಡಕು: ಕಳೆದ ಎರಡು ದಿನಗಳಿಂದ 15 ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಬಿರುಸಿನಿಂದ ಸಾಗುತ್ತಿದ್ದರೂ, ದುರಂತದ ಅಗಾಧತೆಯ ಪ್ರಮಾಣಕ್ಕೆ ಅನುಗುಣವಾಗಿ ಪರಿಹಾರ ಕಾರ್ಯ ನಡೆಸಲು ಸಾಧ್ಯವಾಗುತ್ತಿಲ್ಲ. ಭೂ ಸೇನೆ, ವಾಯುಸೇನೆ ಮತ್ತು ಇತರ ತಂಡಗಳು ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಲಿಕಾಪ್ಟರ್‌ಗಳು ಮತ್ತು ಮೋಟಾರ್‌ ಚಾಲಿತ ಬೋಟ್‌ ಗಳನ್ನು ಬಳಸಿಕೊಳ್ಳಲಾಗಿದೆ. ಕತ್ತಲಾದ ಬಳಿಕವೂ ಬೋಟ್‌ಗಳು ಗ್ರಾಮಸ್ಥರನ್ನು ತೆರವುಗೊಳಿಸಿವೆ.

ಶುಕ್ರವಾರವೂ ಉತ್ತರ, ದಕ್ಷಿಣ ಕರ್ನಾಟಕ, ಕರಾವಳಿ, ಮಲೆನಾಡು ಎನ್ನದೇ ವರ್ಷಧಾರೆ ಬಿರುಸಾಗಿತ್ತು. ಕೃಷ್ಣಾ, ಕಾವೇರಿ, ಭೀಮಾ, ತುಂಗಾ, ಭದ್ರಾ, ಮಲಪ್ರಭಾ, ಘಟಪ್ರಭಾ, ಬೆಣ್ಣೆಹಳ್ಳ, ಧರ್ಮಾ, ಕಾಳಿ, ಅಘನಾಶಿನಿ, ಗಂಗಾವಳಿ, ನೇತ್ರಾವತಿ, ಕುಮಾರಧಾರಾ, ಕಬಿನಿ, ಲಕ್ಷ್ಮಣತೀರ್ಥ, ವರದಾ ಮುಂತಾದ ನದಿಗಳು ಹುಚ್ಚೆದ್ದು ಹರಿದವು. ತಮ್ಮ ಹರಿವಿನ ಹಾದಿಯಲ್ಲಿ ಸಿಕ್ಕ ರಸ್ತೆ, ಸೇತುವೆಗಳನ್ನೆಲ್ಲ ಕೊಚ್ಚಿಕೊಂಡು ಹೋದವು. ಗಟ್ಟಿಮುಟ್ಟಾದ ಸೇತುವೆಗಳ ಮೇಲೆ ಅಪ್ಪಳಿಸಿದ ನೀರ ಹರಿವಿನ ಅಬ್ಬರ ‘ಜಲಪ್ರಳಯ’ದ ನಡುಕ ಹುಟ್ಟಿಸಿದವು. ಇದರಿಂದ ಪರಿಹಾರ ಕಾರ್ಯಕ್ಕೆ ತೊಡಕಾಗಿದೆ.

ರಾತ್ರಿ ನಡುಗಡ್ಡೆಯಲ್ಲಿ ಕಳೆದರು: ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕು ಅಡಿಬಟ್ಟಿ ಗ್ರಾಮದಲ್ಲಿ ಘಟಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿದ ದೃಷ್ಟಿದೋಷ ಇರುವ ವೃದ್ಧರೊಬ್ಬರು ಇನ್ನೇನು ನೀರಿನ ಸೆಳೆತಕ್ಕೆ ಸಿಕ್ಕಿ ಹೋಗುವವರಿದ್ದರು, ಸಕಾಲಕ್ಕೆ ಪ್ರವಾಹ ರಕ್ಷಣಾ ಪಡೆ ಧಾವಿಸಿ ಅವರನ್ನು ರಕ್ಷಿಸಿತು. ಭಾರಿ ಪ್ರಮಾಣದ ನೀರಿನಲ್ಲಿ ಸಿಲುಕಿ ಪ್ರಾಣ ರಕ್ಷಣೆಗಾಗಿ ಅವರು ಮೊರೆ ಇಡುತ್ತಿದ್ದ ದೃಶ್ಯ ಮನಕಲಕುವಂತಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಅಡಿಬಟ್ಟಿ ಗ್ರಾಮವು ನದಿ ನೀರಿನಿಂದ ನಡುಗಡ್ಡೆಯಂತೆ ಆಗಿತ್ತು. ಗುರುವಾರ ರಕ್ಷಣಾ ಕಾರ್ಯದ ಸಂದರ್ಭದಲ್ಲಿ 300 ಜನರನ್ನು ರಕ್ಷಿಸಲಾಗಿತ್ತು. ರಾತ್ರಿ ಇಡೀ ಅವರು ಅಲ್ಲೇ ಕಳೆದಿದ್ದರು. ಬಾಹ್ಯ ಸಂಪರ್ಕಕ್ಕೆ ಫೋನ್‌ ಇಲ್ಲದೇ, ಹತ್ತಿರದಲ್ಲಿ ಯಾರೂ ಇಲ್ಲದೆ ಅವರು ಭೀತಿಗೊಳಗಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದಲೂ ಇಂತದ್ದೇ ಘಟನೆಯೊಂದು ವರದಿಯಾಗಿದೆ. ಇಲ್ಲಿಗೆ ಸಮೀಪದ ಅಣಿಯೂರು ಹಳ್ಳದ ಪ್ರವಾಹದಿಂದ ಕಾಟಾಜೆ ಗ್ರಾಮ ಜಲಾವೃತಗೊಂಡಿತ್ತು. ಅಲ್ಲಿ ನೀರಿನಲ್ಲಿ ಸಿಲುಕಿದ್ದ ವೃದ್ಧರೊಬ್ಬರನ್ನು ರಕ್ಷಿಸಲಾಗಿದೆ.

ಏರ್‌ಲಿಫ್ಟ್‌: ಭೋರ್ಗರೆದು ಹರಿಯು ತ್ತಿರುವ ಮಲಪ್ರಭಾ, ಬೆಣ್ಣೆಹಳ್ಳದ ರಭಸಕ್ಕೆ ಗದಗ ಜಿಲ್ಲೆಯ ಹೊಳೆಆಲೂರು ತತ್ತರಿಸಿ ಹೋಗಿದೆ. ಕಟ್ಟಡಗಳು, ಮನೆಗಳ ಮೇಲೆ ಹತ್ತಿ ನಿಂತ ಜನ ರನ್ನು ಹೆಲಿಕಾಪ್ಟರ್‌ಗಳ ಮೂಲಕ ತೆರವುಗೊಳಿಸಿ ಸುರಕ್ಷಿತ ಸ್ಥಳಗಳಿಗೆ ತಲುಪಿಸಲಾಯಿತು. ವೃದ್ಧೆಯರು, ಹಸುಳೆಗಳನ್ನು ಕಂಕುಳಲ್ಲಿ ಎತ್ತಿಕೊಂಡಿದ್ದ ಮಹಿಳೆಯರ ಕಣ್ಣುಗಳು ನೀರಿನಿಂದ ತುಂಬಿಕೊಂಡಿತ್ತು.

ಬೆಳಗಾವಿ, ಬಾಗಲಕೋಟೆ, ಉತ್ತರಕನ್ನಡ ಜಿಲ್ಲೆಗಳಲ್ಲಿ ಬೋಟ್‌ಗಳು ತಲುಪಲಾಗದ ಸ್ಥಳಗಳಿಗೆ ವಾಯುಪಡೆಯ ಹೆಲಿಕಾಪ್ಟರ್‌ಗಳು ಹೋಗಿ ಸಂತ್ರಸ್ತರನ್ನು ರಕ್ಷಿಸಿದವು. ಸೇನೆಯ ಬೋಟ್‌ಗಳು ಗುರುವಾರ ಮತ್ತು ಶುಕ್ರವಾರ ಕತ್ತಲಾಗುವವರೆಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವು. ಪ್ರವಾಹದಲ್ಲಿ ಸಿಲುಕಿದ ಜನರಿಗೆ ಆಹಾರದ ಪೊಟ್ಟಣಗಳನ್ನು ಹೆಲಿಕಾಪ್ಟರ್‌ಗಳ ಮೂಲಕ ವಿತರಿಸಲಾಯಿತು.

ಬಾಗಲಕೋಟೆ ಜಿಲ್ಲೆಯ ಮಧ್ಯಾ ಹ್ನದ ನಂತರ ವಿಪರೀತ ಮಳೆಯಿಂದಾಗಿ ಹೆಲಿಕಾಪ್ಟರ್‌ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಸಿಕ್ಕಿಬಿದ್ದ ಎಚ್‌.ಕೆ. ಪಾಟೀಲ: ಮುಂಬೈ– ಕರ್ನಾಟಕ ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಕ್ಕೆ ತೆರಳಿದ ಶಾಸಕ ಎಚ್‌.ಕೆ.ಪಾಟೀಲ ನೇತೃತ್ವದ ತಂಡ ಪ್ರವಾಹ ಮಧ್ಯೆ ಸಿಲುಕಿಕೊಂಡಿತು. ಈ ಮಾಹಿತಿ ತಿಳಿದ ತಕ್ಷಣವೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ದೂರವಾಣಿ ಕರೆ ಮಾಡಿ ಯೋಗ ಕ್ಷೇಮ ವಿಚಾರಿಸಿದರು.

ಹೆಚ್ಚುವರಿ ₹100 ಕೋಟಿ ಬಿಡುಗಡೆ

ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಹೆಚ್ಚುವರಿಯಾಗಿ ₹100 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ತಿಳಿಸಿದರು.

ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಶನಿವಾರ ಸಂಜೆ ಅಧಿಕಾರಿಗಳ ಸಭೆ ಕರೆದಿದ್ದು, ಅಗತ್ಯಬಿದ್ದಲ್ಲಿ ಇನ್ನಷ್ಟು ಹಣ ಬಿಡುಗಡೆ ಮಾಡಲಾಗುವುದು ಎಂದರು.

ಅಲ್ಲದೆ, ಎಸ್‌ಡಿಆರ್‌ಎಫ್‌ ನಿಧಿಯ ಎರಡನೇ ಕಂತು ₹126 ಕೋಟಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ಇಂದು ಸಹ ರಜೆ

ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳು, ಉತ್ತರ ಕನ್ನಡ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ಶನಿವಾರವೂ ರಜೆ ಘೋಷಿಸಲಾಗಿದೆ. ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಈಗಾಗಲೇ ಆ.10ರವರೆಗೆ ರಜೆ ಘೋಷಿಸಲಾಗಿದೆ.
ದೇಗುಲಗಳಿಗೆ ಅಪ್ಪಳಿಸಿದ ಪ್ರವಾಹ

ಕಪಿಲೆಯ ರೌದ್ರಾವತಾರಕ್ಕೆ ದಕ್ಷಿಣದ ಕಾಶಿ ನಂಜನಗೂಡು ಶ್ರೀಕಂಠೇಶ್ವರ ದೇವಾಲಯ, ಕೊಡಗಿನಲ್ಲಿ ಶ್ರೀ ಭಗಂಡೇಶ್ವರ ದೇವಾಲಯ, ಬಾದಾಮಿ ತಾಲೂಕಿನ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಪಟ್ಟದಕಲ್ಲು ದೇವಾಲಯ ಮಲಪ್ರಭೆಯ ನೀರಿನಿಂದ ಆವೃತವಾಗಿದೆ. ಉಡುಪಿ ಜಿಲ್ಲೆಯ ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೂ ನೀರು ನುಗ್ಗಿದೆ. ಕಲಬುರ್ಗಿ ಜಿಲ್ಲೆ ಗಾಣಗಾಪುರ ಸಂಗಮ ಕ್ಷೇತ್ರದಲ್ಲಿ ದೇವಸ್ಥಾನಗಳು ನೀರಿನಿಂದ ಸುತ್ತುವರೆದಿವೆ.

13 ಭಾರಿ ಮಳೆಯಾದ ಜಿಲ್ಲೆಗಳು

556 ಮಿ.ಮೀ : ಒಟ್ಟು ಬಿದ್ದ ಮಳೆ

857 ಬಾಧಿತ ಗ್ರಾಮಗಳು

4378 ಮನೆಗಳಿಗೆ ಹಾನಿ

3189 ಜಾನುವಾರು ಸಾವು

1 ಲಕ್ಷ, ಜನರ ರಕ್ಷಣೆ

339 ಸಂತ್ರಸ್ತರ ಶಿಬಿರ

1,74,239 ಆಶ್ರಯಪಡೆದವರು

2,56,594 ಹೆಕ್ಟೇರ್‌ ಬೆಳೆ ನಷ್ಟ

**

ರಾಜ್ಯದಲ್ಲಿ ತಲೆದೋರಿರುವ ಪ್ರವಾಹ ಸ್ಥಿತಿಯನ್ನು ಕೇಂದ್ರ ಸರ್ಕಾರ ಭಾರಿ ಪ್ರಮಾಣದ ರಾಷ್ಟ್ರೀಯ ದುರಂತ ಎಂದು ಘೋಷಿಸಿ, ಶೀಘ್ರವೇ ಹೆಚ್ಚುವರಿ ನೆರವು ಒದಗಿಸಬೇಕು
- ಎಚ್‌.ಡಿ.ದೇವೇಗೌಡ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ

**

ಪ್ರಕೃತಿ ಮುನಿಸಿನ ಎದುರು ಮನುಷ್ಯ ತೃಣಸಮಾನ, ಕೇಂದ್ರದಿಂದ ಸಂತ್ರಸ್ತರಿಗೆ ಎಲ್ಲ ನೆರವು ಬರುತ್ತಿದೆ. ನೊಂದಿರುವವರ ಜತೆ ಪೊಲೀಸರು ಸಹನೆಯಿಂದ ವರ್ತಿಸಬೇಕು.
- ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.