ಬೆಂಗಳೂರು: 'ಮೈಸೂರಿನ ಉದಯಗಿರಿ ಗಲಭೆ ಪ್ರಕರಣಕ್ಕೆ ಪೊಲೀಸರೇ ಕಾರಣ. ಕಲ್ಲು ತೂರಾಟ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಕರ್ತವ್ಯ ಲೋಪ ಎಸಗಿದ್ದಾರೆ’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ದೂರಿದ್ದಾರೆ.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪೊಲೀಸರು ಕನಿಷ್ಠ ಪ್ರಜ್ಞೆ ಇಲ್ಲದಂತೆ ವರ್ತಿಸಿದ್ದಾರೆ ಎಂದು ಕಿಡಿಕಾರಿದರು.
‘ಆರ್‌ಎಸ್ಎಸ್ ವ್ಯಕ್ತಿ ಧರ್ಮನಿಂದನೆ ಕೃತ್ಯ ಮಾಡಿದ್ದಾನೆ. ಅವನ ಮೇಲೆ ಪ್ರಕರಣ ದಾಖಲು ಮಾಡಿ ಬಂಧಿಸಲಾಗಿದೆ. ಆರೋಪಿಯನ್ನು ಶೇ 99 ರಷ್ಟು ಮುಸ್ಲಿಮರೇ ಇರುವ ಉದಯಗಿರಿ ಬಡಾವಣೆಯ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಸಹಜವಾಗಿ ಜನ ಒಟ್ಟಾಗಿ ಸೇರಿದ್ದಾರೆ. ಗಲಾಟೆ ಮಾಡಿದ್ದಾರೆ’ ಎಂದು ತಿಳಿಸಿದರು.
‘ಆಡಳಿತ ನಡೆಸುವುದು ಸಚಿವರ ಜವಾಬ್ದಾರಿ ಮಾತ್ರವಲ್ಲ. ಅಧಿಕಾರಿಗಳಿಗೂ ಜವಾಬ್ದಾರಿ ಇದೆ. ಪೊಲೀಸರಿಗೆ ತಲೆಯಲ್ಲಿ ಬುದ್ಧಿ ಇಲ್ಲವೇ? ರಸ್ತೆಯಲ್ಲಿ ಹೋಗುವ ಕೆಲಸಕ್ಕೆ ಬಾರದ ಅನಾಮಧೇಯ ವ್ಯಕ್ತಿಗಿರುವ ಸಾಮಾನ್ಯ ಜ್ಞಾನ ದೊಡ್ಡ ಬ್ಯಾಡ್ಜ್ ಹಾಕಿಕೊಂಡು ತಿರುಗುವ ಅಧಿಕಾರಿಗಳಿಗಿಲ್ಲ’ ಎಂದು ಹರಿಹಾಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.