ಬೆಂಗಳೂರು: ‘ರಾಜ್‌ಕುಮಾರ್ ಅವರು ನಿಧನರಾದಾಗ ಅವರ ಕುಟುಂಬದವರು ಸರ್ಕಾರಕ್ಕೆ ಮಾಹಿತಿ ನೀಡಿರಲಿಲ್ಲ. ಬದಲಿಗೆ ಆಸ್ಪತ್ರೆಯಲ್ಲೇ ಆ ವಿಚಾರವನ್ನು ಘೋಷಿಸಿಬಿಟ್ಟರು’ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
‘ದೊಡ್ಡ ವ್ಯಕ್ತಿಗಳು ಮೃತಪಟ್ಟಾಗ ಎಲ್ಲ ಸಿದ್ಧತೆ ಮಾಡಿಕೊಂಡು ಆ ವಿಷಯವನ್ನು ಬಹಿರಂಗಪಡಿಸುವುದು ವಾಡಿಕೆ. ಸಿದ್ಧತೆ ಮಾಡಿಕೊಳ್ಳಬೇಕು ಮತ್ತು ಗೊಂದಲ ಉಂಟಾಗಬಾರದು ಎಂದೇ ಗೌಪ್ಯತೆ ಕಾಪಾಡಿಕೊಳ್ಳಲಾಗುತ್ತದೆ. ರಾಜ್‌ಕುಮಾರ್ ಕುಟುಂಬದವರು ಆ ಗೌಪ್ಯತೆ ಕಾಪಾಡಲಿಲ್ಲ’ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
‘ಆಸ್ಪತ್ರೆಯಿಂದ ಅವರ ಪಾರ್ಥಿವ ಶರೀರವನ್ನು ತಮ್ಮ ಮನೆಗೆ ಒಯ್ದು ಮನೆಯ ನೆಲಮಾಳಿಗೆಯಲ್ಲಿ ಇರಿಸಿದರು. ರಾಜ್‌ಕುಮಾರ್ ಅವರು ನೇತ್ರದಾನ ಮಾಡಿದ್ದರಿಂದ ಸಂಬಂಧಿತ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು. ನಾನೂ ಅಲ್ಲಿಗೆ ಹೋಗಿದ್ದೆ. ಗೌಪ್ಯತೆ ಕಾಪಾಡಿಕೊಳ್ಳದೇ ಇದ್ದ ಕಾರಣಕ್ಕೆ ಸಿದ್ಧತೆಗೂ ಮುನ್ನವೇ ಹೆಚ್ಚಿನ ಜನ ಸೇರಿದ್ದರು. ಆದರೂ ಗಲಾಟೆ ಆಗಿರಲಿಲ್ಲ’ ಎಂದರು.
‘ಆದರೆ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲೇಬೇಕು ಎಂದು ಕೆಲವರು ಟೆಂಪೋಗಳಲ್ಲಿ ಗೂಂಡಾಗಳನ್ನು ಕರೆಸಿದ್ದರು. ಅವರು ಕಲ್ಲು ತೂರಿದರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು. ಅಂಬರೀಷ್ ಅವರು ಮೃತಪಟ್ಟಾಗ ನಾನೇ ಮುಖ್ಯಮಂತ್ರಿಯಾಗಿದ್ದೆ. ಆಗ ಗಲಾಟೆ ಆಗಿತ್ತೇ? ಪುನೀತ್ ರಾಜ್‌ಕುಮಾರ್ ಮೃತಪಟ್ಟಾಗ ಬಿಜೆಪಿ ಅಧಿಕಾರದಲ್ಲಿ ಇತ್ತು. ಆಗ ಗಲಾಟೆ ಆಗಿತ್ತೇ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.