ADVERTISEMENT

ರಾಜ್ಯಸಭೆ ಚುನಾವಣೆ | ಬಿಜೆಪಿ, ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಪೈಪೋಟಿ

ಇದೇ 19ಕ್ಕೆ ಮತದಾನ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 2:00 IST
Last Updated 2 ಜೂನ್ 2020, 2:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಬೆಂಗಳೂರು: ಇದೇ 19ಕ್ಕೆ ಚುನಾವಣೆ ನಡೆಯಲಿರುವ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಬಿರುಸಿನ ಪೈಪೋಟಿ ಶುರುವಾಗಿದೆ.

ಕರ್ನಾಟಕ ವಿಧಾನಸಭಾ ಸದಸ್ಯರಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಬಿಜೆಪಿಯ ಪ್ರಭಾಕರ ಕೋರೆ, ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್‌, ರಾಜೀವ್‌ಗೌಡ ಮತ್ತು ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಅವರ ಅವಧಿ ಇದೇ ತಿಂಗಳು ಮುಗಿಯಲಿದೆ. ಈ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ 2 ಮತ್ತು ಕಾಂಗ್ರೆಸ್‌ 1 ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದು. 34 ಶಾಸಕರನ್ನು ಹೊಂದಿರುವ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಕಾಂಗ್ರೆಸ್‌ ನೆರವಿನಿಂದ ಗೆಲ್ಲಬಹುದು.

ಬಿಜೆಪಿಯಿಂದ ಪಕ್ಷದ ರಾಜ್ಯ ಉಸ್ತುವಾರಿಯಾಗಿರುವ ಮುರಳೀಧರ ರಾವ್‌ ಅವರು ರಾಜ್ಯಸಭಾ ಸ್ಥಾನದ ಮೇಲೆ ಕಣ್ಣಿಟ್ಟು, ಪ್ರಯತ್ನಗಳನ್ನು ಆರಂಭಿಸಿದ್ದಾರೆ. ಕಾಂಗ್ರೆಸ್‌ಗೆ ಒಂದೇ ಸ್ಥಾನ ಸಿಗಲಿದ್ದು, ಆಕಾಂಕ್ಷಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಹೆಸರೂ ಮುನ್ನೆಲೆಗೆ ಬಂದಿದೆ.

ADVERTISEMENT

ಜೆಡಿಎಸ್‌ನಿಂದ ಎಚ್‌.ಡಿ. ದೇವೇಗೌಡ ಅವರು ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇದ್ದರೆ, ದೇವೇಗೌಡರು ಸುಲಭವಾಗಿ ಗೆಲ್ಲಬಹುದು. ದೇವೇಗೌಡರಿಗೆ ಬಿಜೆಪಿ ಅಡ್ಡಿ ಮಾಡಲಾರದು ಎಂದು ಮೂಲಗಳು ಹೇಳಿವೆ.

ಬಿಜೆಪಿಯಿಂದ ಎರಡು ಬಾರಿ ರಾಜ್ಯಸಭಾ ಸದಸ್ಯರಾದ ಪ್ರಭಾಕರ ಕೋರೆಯವರನ್ನು ಇನ್ನೊಂದು ಅವಧಿಗೆ ಮುಂದುವರಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ತೇಜಸ್ವಿನಿ ಅನಂತಕುಮಾರ್‌ ಹೆಸರೂ ಕೇಳಿ ಬಂದಿದೆ.

ಒಂದು ಸ್ಥಾನಕ್ಕೆ ಉತ್ತರ ಕರ್ನಾಟಕ ಭಾಗದಿಂದ ಪ್ರೊ.ಎಂ.ನಾಗರಾಜ್‌ ಅವರ ಹೆಸರು ಕೇಳಿ ಬರುತ್ತಿದೆ. ಶಾಸಕ ಉಮೇಶ‌ ಕತ್ತಿ ತಮ್ಮ ಸಹೋದರ ರಮೇಶ‌ ಕತ್ತಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಕಾಂಗ್ರೆಸ್‌ನಲ್ಲೂ ಆಕಾಂಕ್ಷಿಗಳ ಸಂಖ್ಯೆ ಏರುತ್ತಲೇ ಇದೆ. ಬಿ.ಕೆ.ಹರಿಪ್ರಸಾದ್‌, ವಿ.ಎಸ್‌.ಉಗ್ರಪ್ಪ, ರಾಜೀವ್‌ಗೌಡ ಅವರ ಸಾಲಿಗೆ ಇದೀಗ ಮಲ್ಲಿಕಾರ್ಜುನ ಖರ್ಗೆಯವರ ಹೆಸರೂ ಸೇರಿದೆ. ಉಗ್ರಪ್ಪ ಅವರನ್ನು ರಾಜ್ಯಸಭೆಗೆ ಕಳಿಸಬೇಕು ಎಂಬುದು ಸಿದ್ದರಾಮಯ್ಯ ಅವರ ಇಚ್ಛೆ. ಆದರೆ, ಖರ್ಗೆ ಮುಂದೆ ಬಂದರೆ, ಅವರಿಗೆ ಸಿದ್ದರಾಮಯ್ಯ ಅಡ್ಡಿಪಡಿ ಸುವುದಿಲ್ಲಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.