ADVERTISEMENT

ರಾಜ್ಯಸಭೆ ಚುನಾವಣೆ: ತಂತ್ರಗಾರಿಕೆಯಲ್ಲೇ ದಿನವಿಡೀ ಕಳೆದ ನಾಯಕರು

ಬಲ ಪ್ರದರ್ಶನಕ್ಕೆ ಮೂರೂ ರಾಜಕೀಯ ಪಕ್ಷಗಳ ತೀವ್ರ ಕಸರತ್ತು

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 19:45 IST
Last Updated 10 ಜೂನ್ 2022, 19:45 IST
ರಾಜ್ಯಸಭೆ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ಅವರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಿಹಿ ತಿನ್ನಿಸಿ ಅಭಿನಂದಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಮುನಿರತ್ನ, ಬಿಜೆಪಿ ಶಾಸಕ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಉಪಸ್ಥಿತರಿದ್ದರು  – ಪ್ರಜಾವಾಣಿ ಚಿತ್ರ
ರಾಜ್ಯಸಭೆ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ಅವರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಿಹಿ ತಿನ್ನಿಸಿ ಅಭಿನಂದಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಮುನಿರತ್ನ, ಬಿಜೆಪಿ ಶಾಸಕ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಉಪಸ್ಥಿತರಿದ್ದರು  – ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿಧಾನಸೌಧದ ಮೊಗಸಾಲೆಗಳು ಶುಕ್ರವಾರ ರಾಜ್ಯಸಭೆ ಚುನಾವಣೆಯ ಜಿದ್ದಾಜಿದ್ದಿಯ ಕಣವಾಗಿ ಮಾರ್ಪಟ್ಟಿದ್ದವು. ಹೇಗಾದರೂ ಗುರಿ ಸಾಧಿಸಲೇಬೇಕು ಎಂಬ ಹಟಕ್ಕೆ ಬಿದ್ದಿದ್ದ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮೂರೂ ಪಕ್ಷಗಳ ನಾಯಕರು ದಿನವಿಡೀ ತಂತ್ರಗಾರಿಕೆಯಲ್ಲೇ ಕಳೆದರು.

ಮೊದಲ ಇಬ್ಬರು ಅಭ್ಯರ್ಥಿಗಳಿಗೆ ತಲಾ 46 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಹಂಚಿಕೆ ಮಾಡಿ, ಉಳಿದ ಮತಗಳನ್ನು ಲಹರ್‌ ಸಿಂಗ್‌ ಸಿರೋಯ ಅವರಿಗೆ ನೀಡಲು ಬಿಜೆಪಿ ನಾಯಕರು ಮೊದಲು ತೀರ್ಮಾನಿಸಿದ್ದರು. ಆದರೆ, ಶುಕ್ರವಾರ ಬೆಳಿಗ್ಗೆ ತಂತ್ರಗಾರಿಕೆ ಬದಲಿಸಿದರು. ನಿರ್ಮಲಾ ಸೀತಾರಾಮನ್‌ ಅವರಿಗೆ 46, ಜಗ್ಗೇಶ್‌ ಅವರಿಗೆ 44 ಮತಗಳನ್ನು ನೀಡಿ, ಉಳಿದ ಮತಗಳನ್ನು ಲಹರ್‌ ಸಿಂಗ್‌ಗೆ ಹಂಚಿಕೆ ಮಾಡಿದರು.

ಪ್ರಥಮ ಪ್ರಾಶಸ್ತ್ಯದ ಮತಗಳಿಂದ ನಿರ್ಮಲಾ ಗೆಲುವು ಖಾತರಿಪಡಿಸಿಕೊಂಡು, ಉಳಿದ ಇಬ್ಬರನ್ನೂ ದ್ವಿತೀಯ ಪ್ರಾಶಸ್ತ್ಯದ ಮತಗಳಿಂದ ಗೆಲ್ಲಿಸಿಕೊಳ್ಳುವುದು ಬಿಜೆಪಿಯ ಲೆಕ್ಕಾಚಾರವಾಗಿತ್ತು. ಸಚಿವರಾದ ಆರ್‌.ಅಶೋಕ, ವಿ.ಸುನಿಲ್‌ ಕುಮಾರ್‌ ಮತ್ತು ಬಿ.ಸಿ.ನಾಗೇಶ್‌ ಅವರಿಗೆ ಅಭ್ಯರ್ಥಿಗೆ ಹಂಚಿಕೆಯಾದ ಶಾಸಕರ ಮತಗಳು ಕೈತಪ್ಪದಂತೆ ಎಚ್ಚರಿಕೆ ವಹಿಸುವ ಜವಾಬ್ದಾರಿ ನೀಡಲಾಗಿತ್ತು. ಈ ತಂತ್ರಗಾರಿಕೆ ಫಲ ನೀಡಿತು.

ADVERTISEMENT

ಸೋಲಿನಲ್ಲೂ ಜಿದ್ದಾಜಿದ್ದಿ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಇಡೀ ದಿನ ಜಿದ್ದಾಜಿದ್ದಿಯ ರಾಜಕಾರಣ ನಡೆಯಿತು. ಪಕ್ಷದ ಶಾಸಕರ ಮತಗಳು ಕೈ ಜಾರದಂತೆ ತಡೆಯುವುದಕ್ಕೇ ಆದ್ಯತೆ ನೀಡಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಂತ್ರಗಾರಿಕೆ ನಡೆಸಿದರು. ಶಿವಕುಮಾರ್‌ ಸ್ವತಃ ಮತಗಟ್ಟೆ ಏಜೆಂಟರಾಗಿ ಕಾರ್ಯನಿರ್ವಹಿಸಿದರು. ಆಗಾಗ ಬಂದು ಸಿದ್ದರಾಮಯ್ಯ ಜತೆ ಚರ್ಚಿಸುತ್ತಿದ್ದರು.

ಮತದಾನ ನಡೆಯುವಾಗ ಸಿದ್ದರಾಮಯ್ಯ ಹತ್ತಕ್ಕೂ ಹೆಚ್ಚು ಶಾಸಕರ ಜತೆ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಕುಳಿತಿದ್ದರು. ಬಿಜೆಪಿ ಮತ್ತು ಜೆಡಿಎಸ್‌ನ ಎಲ್ಲ ಶಾಸಕರು ಮತ ಚಲಾಯಿಸಿರುವುದು ಖಾತರಿಯಾದ ಬಳಿಕ ಪಕ್ಷದ ಶಾಸಕರ ಜತೆ ಹೋಗಿ ಮತ ಚಲಾಯಿಸಿದರು. ಜೆಡಿಎಸ್‌ ಗೆಲುವು ಸಾಧಿಸದಂತೆ ಖಚಿತಪಡಿಸಿಕೊಳ್ಳುವುದೇ ಈ ತಂತ್ರಗಾರಿಕೆಯ ಉದ್ದೇಶ ಎಂದು ಗೊತ್ತಾಗಿದೆ.

ಫಲಿಸದ ಒಗ್ಗಟ್ಟಿನ ತಂತ್ರ: ಪಕ್ಷದ ಎಲ್ಲ ಶಾಸಕರನ್ನೂ ಹಿಡಿದಿಟ್ಟುಕೊಂಡು ಒಗ್ಗಟ್ಟು ಪ್ರದರ್ಶಿಸಲು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ತಂತ್ರ ರೂಪಿಸಿದ್ದರು. ಅದರಂತೆಯೇ 26 ಶಾಸಕರೊಂದಿಗೆ ಗುರುವಾರದಿಂದ ಗೊರಗುಂಟೆಪಾಳ್ಯದ ಹೋಟೆಲ್‌ ಒಂದರಲ್ಲಿ ತಂಗಿದ್ದರು. ಅವರೆಲ್ಲರ ಜತೆ ಬಸ್‌ನಲ್ಲಿ ಶುಕ್ರವಾರ ಬೆಳಿಗ್ಗೆ ವಿಧಾನಸೌಧಕ್ಕೆ ಬಂದು ಮತ ಚಲಾಯಿಸಿದರು.

ಜೆಡಿಎಸ್‌ನ ಎ.ಟಿ. ರಾಮಸ್ವಾಮಿ, ಕೆ.ಎಂ. ಶಿವಲಿಂಗೇಗೌಡ, ಕೆ. ಶ್ರೀನಿವಾಸ ಗೌಡ, ಎಸ್.ಆರ್‌. ಶ್ರೀನಿವಾಸ್ (ಗುಬ್ಬಿ) ಮತ್ತು ಜಿ.ಟಿ. ದೇವೇಗೌಡ ಪ್ರತ್ಯೇಕವಾಗಿ ಬಂದು ಮತ ಚಲಾಯಿಸಿದರು. ಶ್ರೀನಿವಾಸಗೌಡ ಮತ್ತು ಗುಬ್ಬಿ ಶ್ರೀನಿವಾಸ್‌ ಅಡ್ಡ ಮತ ಚಲಾಯಿಸಿದರೆ, ಉಳಿದ ಮೂವರೂ ‘ಪಕ್ಷನಿಷ್ಠೆ’ ಪ್ರದರ್ಶಿಸಿದರು.

‘ಯಾರನ್ನೂ ಹೈಜಾಕ್‌ ಮಾಡಿಲ್ಲ’
‘ಕಾಂಗ್ರೆಸ್‌ ಪಕ್ಷ ಇತರ ಪಕ್ಷಗಳ ಶಾಸಕರನ್ನು ಹೈಜಾಕ್‌ ಮಾಡಿಲ್ಲ. ನಮ್ಮ ಶಾಸಕರ ಮತಗಳು ಕೈತಪ್ಪಿಲ್ಲ. ನಮಗೆ ಅಷ್ಟು ಸಾಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಮತದಾನ ಅಂತ್ಯಗೊಂಡ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಶಾಸಕರು ವಿಪ್‌ ಪಾಲಿಸಿದ್ದಾರೆ. ನಮ್ಮ ಪಕ್ಷದ ಎಲ್ಲ 69 ಶಾಸಕರು ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ನೀಡಿದ್ದಾರೆ. ಅದನ್ನು ಕಣ್ಣಾರೆ ನೊಡಿದ್ದೇನೆ. ಅದು ನನಗೆ ಸಾಕು’ ಎಂದರು.

‘ಕಾಂಗ್ರೆಸ್‌ ಇತರ ಪಕ್ಷಗಳ ಶಾಸಕರನ್ನು ಹೈಜಾಕ್‌ ಮಾಡಲು ಯತ್ನಿಸಿಲ್ಲ. ಅಂತಹ ಅಗತ್ಯವೂ ಇಲ್ಲ. ಇತರ ಪಕ್ಷದವರನ್ನು ಮುಜುಗರಕ್ಕೆ ಸಿಲುಕಿಸುವುದು ನಮಗೆ ಇಷ್ಟವಿಲ್ಲ. ಆರೋಪ ಮಾಡುವವರಿಗೆ ನಾವು ಏನು ಸಲಹೆ ನೀಡಿದ್ದೆವು ಎಂಬುದನ್ನು ಅವರ ಬಳಿಯೇ ಕೇಳಿನೋಡಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.