ADVERTISEMENT

ಜೆಡಿಎಸ್ ಜಾತ್ಯತೀತೆಯಲ್ಲಿ ನಂಬಿಕೆಯಿದ್ದರೆ ಕಾಂಗ್ರೆಸ್‌ ಬೆಂಬಲಿಸಲಿ:ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 9:06 IST
Last Updated 9 ಜೂನ್ 2022, 9:06 IST
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಮಾತನಾಡಿದರು. ಶಾಸಕ ಶರತ್ ಬಚ್ಚೇಗೌಡ, ರಿಜ್ವಾನ್ ಅರ್ಷದ್, ಕೃಷ್ಣಬೈರೇಗೌಡ, ಆರ್.ಧ್ರುವನಾರಾಯಣ ಇದ್ದಾರೆ
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಮಾತನಾಡಿದರು. ಶಾಸಕ ಶರತ್ ಬಚ್ಚೇಗೌಡ, ರಿಜ್ವಾನ್ ಅರ್ಷದ್, ಕೃಷ್ಣಬೈರೇಗೌಡ, ಆರ್.ಧ್ರುವನಾರಾಯಣ ಇದ್ದಾರೆ   

ಮೈಸೂರು: ‘ಜಾತ್ಯತೀತ ತತ್ವದಲ್ಲಿ ಜೆಡಿಎಸ್‌ಗೆ ನಂಬಿಕೆಯಿದ್ದರೆ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲಿ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.

‘ಕಾಂಗ್ರೆಸ್‌ ಮೊದಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅದನ್ನರಿತು ಜೆಡಿಎಸ್‌ ನಿಲುವು ತೆಗೆದುಕೊಳ್ಳಬೇಕು. ಈ ಹಿಂದೆ ಲೋಕಸಭಾ, ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿಸಿದ್ದೆವು ಎಂಬುದನ್ನು ನೆನಪಿಸಿಕೊಳ್ಳಲಿ’ ಎಂದು ಗುರುವಾರ ಕಾಂಗ್ರೆಸ್‌ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.\

‘ಬಿಜೆಪಿ ಸರ್ಕಾರಗಳ ಕೆಟ್ಟ ಆಡಳಿತವನ್ನು ಪದವೀಧರರು, ಶಿಕ್ಷಕರು ನೋಡಿದ್ದಾರೆ. ಕಾಂಗ್ರೆಸ್‌ನ ಜನಪರ ಆಡಳಿತದೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ದೊರೆಯಲಿದೆ. 2023ರ ವಿಧಾನಸಭೆ ಚುನಾವಣೆಯಲ್ಲೂ 150 ಸೀಟುಗಳ ಗುರಿ ಮುಟ್ಟಿ ಸ್ವಂತ ಬಲದಿಂದ ಅಧಿಕಾರ ರಚಿಸಲಿದ್ದೇವೆ’ ಎಂದರು.

ಶಾಸಕ ಕೃಷ್ಣ ಭೈರೇಗೌಡ ಮಾತನಾಡಿ, ‘2019ರಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಯಬೇಕಾಗಿದ್ದ ದೇವೇಗೌಡರು ಕೊನೆಕ್ಷಣದಲ್ಲಿ ತುಮಕೂರಿನಿಂದ ಸ್ಪರ್ಧಿಸಿದರು. ಪಕ್ಷವು ಮರು ಮಾತಿಲ್ಲದೆ ಆಗಿನ ಸಂಸದ ಮುದ್ದಹನುಮೇಗೌಡರ ಬದಲು ಸ್ಪರ್ಧಿಸಲು ಅನುವು ಮಾಡಿಕೊಟ್ಟಿತು. ಹನುಮೇಗೌಡರಿಗೆ ಆದ ಅನ್ಯಾಯವನ್ನು ಈವರೆಗೂ ಸರಿಪಡಿಸಲು ಆಗಿಲ್ಲ. ನಾನು ಸಿದ್ಧತೆಯಿಲ್ಲದೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಕಷ್ಟ ಅನುಭವಿಸಿದೆ’ ಎಂದರು.

‘ದೇವೇಗೌಡರ ಹಿರಿತನಕ್ಕೆ ಗೌರವಕೊಟ್ಟು ರಾಜ್ಯಸಭೆಯಲ್ಲಿ ರಾಜ್ಯದ ಪ್ರತಿನಿಧಿಯಿರಲಿ ಅನ್ನುವ ಸ್ಪಷ್ಟ ಮನೋಭಾವದಿಂದ ಬೆಂಬಲ ನೀಡಿದ್ದೆವು. ಕುಪೇಂದ್ರ ರೆಡ್ಡಿ ಅವರನ್ನೂ ಬೆಂಬಲಿಸಿದ್ದೇವೆ. ಪಕ್ಷದ ರೆಹಮಾನ್ ಖಾನ್‌, ಮನ್ಸೂರ್‌ ಅವರು ದೇವೇಗೌಡರನ್ನು ಭೇಟಿ ಮಾಡಿ ಸಹಕರಿಸಬೇಕೆಂದು ಕೋರಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಬೆಂಬಲಿಸುವುದು, ಬಿಡುವುದು ಅವರಿಗೆ ಬಿಟ್ಟದ್ದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.