ADVERTISEMENT

ಸಿದ್ದರಾಮಯ್ಯ ತಮ್ಮ ಮೇಲೆ ತಾವೇ ಚಪ್ಪಡಿ ಕಲ್ಲು ಎಳೆದುಕೊಂಡಿದ್ದಾರೆ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 8:28 IST
Last Updated 4 ಜೂನ್ 2022, 8:28 IST
 ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಹುಬ್ಬಳ್ಳಿ: ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ನ ಹೆಚ್ಚುವರಿ ಮತಗಳನ್ನು ಅಡ್ಡ ಮತದಾನದ ಮೂಲಕ ಪಡೆದು ಎರಡನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕಿರುವ ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ತಮ್ಮ ಮೇಲೆ ತಾವೇ ಚಪ್ಪಡಿ ಕಲ್ಲು ಎಳೆದುಕೊಂಡಿದ್ದಾರೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದಾರೋ ಅಥವಾ ತಮ್ಮ ಮೇಲೆ ತಾವೇ ಕಲ್ಲು ಎಳೆದುಕೊಂಡಿದ್ದಾರೆಯೋ ಎನ್ನುವುದು ಫಲಿತಾಂಶದ ದಿನ ಗೊತ್ತಾಗಲಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಕುಟುಕಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಮುಕ್ತ ಚುನಾವಣೆಯಾಗಿರುವುದರಿಂದ ಅಡ್ಡ ಮತದಾನ ಅಷ್ಟು ಸುಲಭ ಅಲ್ಲ. 2016ರಲ್ಲಿ ಅಡ್ಡ ಮತದಾನ ಹಾಕಿದ ಏಳು ಜನರ ಪೈಕಿ ನಾಲ್ಕು ಜನರ ಸ್ಥಿತಿ ಏನಾಗಿದೆ ಎನ್ನುವುದನ್ನು ಇಡೀ ರಾಜ್ಯವೇ ಗಮನಿಸಿದೆ. ನಮ್ಮ ಪಕ್ಷದ 32 ಮತಗಳು ನಮ್ಮ ಅಭ್ಯರ್ಥಿಗೆ ಸಿಗಲಿದೆ ಎನ್ನುವ ವಿಶ್ವಾಸ ತಮಗಿದೆ ಎಂದು ಹೇಳಿದರು.

ಸದಸ್ಯರ ಸಂಖ್ಯಾಬಲದ ಮೇಲೆ ಬಿಜೆಪಿಯ ಇಬ್ಬರು ಹಾಗೂ ಕಾಂಗ್ರೆಸ್‌ನ ಒಬ್ಬ ಅಭ್ಯರ್ಥಿ ಸುಲಭವಾಗಿ ಗೆಲ್ಲುತ್ತಾರೆ. ನಾಲ್ಕನೇ ಅಭ್ಯರ್ಥಿಗಾಗಿ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿ ಯಾವ ಸಂದರ್ಭದಲ್ಲಿಯೂ ಗೆಲ್ಲಲು ಸಾಧ್ಯವಿಲ್ಲ. ಇದು ಸಿದ್ದರಾಮಯ್ಯ ಅವರಿಗೆ ಗೊತ್ತಿದ್ದರೂ ಜೆಡಿಎಸ್‌ ಅಭ್ಯರ್ಥಿಯನ್ನು ಸೋಲಿಸಲು ಹಾಗೂ ಬಿಜೆಪಿಯ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಲು ಸಹಾಯ ಮಾಡಲೆಂದು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್‌ ಪಕ್ಷದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಹಾಗೂ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬಹುಕಾಲದ ಸ್ನೇಹಿತರು. ಹೀಗಾಗಿ ಖರ್ಗೆ ಅವರು ತಮ್ಮ ಪಕ್ಷದ ಹೈಕಮಾಂಡ್‌ ಮಟ್ಟದಲ್ಲಿ ರೆಡ್ಡಿ ಪರವಾಗಿ ವಕಾಲತ್ತು ವಹಿಸಿದ್ದರು. ಇದರ ಹೊರತು, ನಾವು ಖರ್ಗೆ ಅವರನ್ನು ಕೇಳಿಕೊಂಡಿರಲಿಲ್ಲ ಎಂದು ಹೇಳಿದರು.

ನನ್ನ ಗುರಿ ರಾಜ್ಯಸಭೆ ಅಲ್ಲ:ರಾಜ್ಯ ಸಭೆ ಚುನಾವಣೆಯಲ್ಲಿ ಗೆದ್ದರೆ ಪಕ್ಷಕ್ಕೆ ಶಕ್ತಿ ಬರುತ್ತದೆ. ಗೆಲ್ಲದಿದ್ದರೆ ನಷ್ಟವೇನಿಲ್ಲ. ನನ್ನ ಗುರಿ ರಾಜ್ಯಸಭೆ ಅಲ್ಲ. 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ. ಈ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ದೇನೆ. ಒಂದು ಬಾರಿ ಸಂಪೂರ್ಣ ಬಹುಮತ ನೀಡಿ ಎಂದು ಜನರಲ್ಲಿ ಕೇಳಿಕೊಳ್ಳುವೆ. ಅವರು ನೀಡದಿದ್ದರೆ ಪಕ್ಷವನ್ನು ವಿಸರ್ಜಿಸುವೆ. ಜನರೇ ಮತ ನೀಡದಿದ್ದಾಗ ಪಕ್ಷ ಇಟ್ಟುಕೊಂಡು ಏನು ಮಾಡಲಿ ಎಂದು ಹತಾಶರಾಗಿ ನುಡಿದರು.

ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ಬಳಿ ದೇವಸ್ಥಾನ ಇರುವುದು ನಿಜ. ದೇವಸ್ಥಾನ ಉಳಿಯಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಅಲ್ಲಿನ ದೇವಸ್ಥಾನ ಉಳಿಸಬೇಕೆಂದು ರಾಜ್ಯದ ತುಂಬೆಲ್ಲ ಜನರು ಹೊರಟಿದ್ದಾರೆ. ಆದರೆ, ಭಾರತೀಯ ಪುರಾತತ್ವ ಇಲಾಖೆಯ ಕಠಿಣ ನಿಯಮಾವಳಿಗಳಿಂದಾಗಿ ಅಲ್ಲಿನ ಜನರಿಗೆ ಮನೆ ಕಟ್ಟಿಕೊಳ್ಳಲು ಸಾಧ್ಯವಾಗದಂತಹ ಸ್ಥಿತಿ ಇದೆ. ಅಲ್ಲಿನ ಜನರಿಗೆ ಮನೆ ಬೇಕಾಗಿದೆ ಎಂದು ಹೇಳಿದರು.

ಈಗ ಹೋರಾಟ ಮಾಡುತ್ತಿರುವವರು ಧರ್ಮ ಉಳಿಸಲು ಅಲ್ಲ, ಅವರ ಉದ್ದೇಶ ಬೇರೆ ಇದೆ. ಹಿಂದಿನ ಇತಿಹಾಸ ಕೆಣಕಲು ಹೊರಟಿರುವ ಉದ್ದೇಶ ಏನು ಎನ್ನುವುದು ನನಗೆ ಗೊತ್ತು. ನಮ್ಮ ಉದ್ದೇಶ ಎಲ್ಲ ಧರ್ಮಗಳು ಉಳಿಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಜೆಪಿ ಮಾದರಿಯಲ್ಲಿ ಪಕ್ಷ ಸಂಘಟನೆ:ಅಸ್ತಿತ್ವವೇ ಇಲ್ಲದಂತಹ ರಾಜ್ಯಗಳಲ್ಲಿ ಬಿಜೆಪಿ ಹೇಗೆ ಬೆಳೆಯಿತು. ಪಕ್ಷವನ್ನು ಹೇಗೆ ಕಟ್ಟಲಾಯಿತು ಎನ್ನುವುದರ ಬಗ್ಗೆ ಹಲವಾರು ಪುಸ್ತಕಗಳು ಬಂದಿವೆ. ಎರಡು ವರ್ಷದ ಕೋವಿಡ್‌ ಸಂದರ್ಭದಲ್ಲಿ ಈ ಪುಸ್ತಕಗಳನ್ನೆಲ್ಲ ಓದಿದ್ದೇನೆ. ಅದೇ ಮಾದರಿಯಲ್ಲಿ ಜೆಡಿಎಸ್‌ ಕಟ್ಟುವೆ. ಪಕ್ಷ ಸಂಘಟಿಸುವಲ್ಲಿ ಮಾತ್ರ ಬಿಜೆಪಿ ಮಾದರಿ, ಬೇರೆ ವಿಷಯದಲ್ಲಿ ಅಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.