ADVERTISEMENT

ಜಾಲತಾಣ: ಶ್ರೀನಿವಾಸ್‌ ‘ತಿಥಿ ಕಾರ್ಡ್‌’, ಕುಮಾರಸ್ವಾಮಿ ‘ಮಿಸ್ಸಿಂಗ್ ಕಾರ್ಡ್ ಸಮರ

ಜೆಡಿಎಸ್‌ ಬಂಡಾಯ ಶಾಸಕರು, ಎಚ್‌ಡಿಕೆ ಬೆಂಬಲಿಗರ ಮಧ್ಯೆ ಕಿತ್ತಾಟ ತಾರಕಕ್ಕೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 6:07 IST
Last Updated 13 ಜೂನ್ 2022, 6:07 IST
ಕುಮಾರಸ್ವಾಮಿ, ಶ್ರೀನಿವಾಸ್‌
ಕುಮಾರಸ್ವಾಮಿ, ಶ್ರೀನಿವಾಸ್‌   

ತುಮಕೂರು: ರಾಜ್ಯಸಭಾ ಚುನಾವಣೆ ಮತದಾನದ ನಂತರ ಜೆಡಿಎಸ್‌ ಬಂಡಾಯ ಶಾಸಕರ ಬೆಂಬಲಿಗರು ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಬೆಂಬಲಿಗರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ‘ತಿಥಿ ಕಾರ್ಡ್‌’ ಸಮರ ಜೋರಾಗಿದೆ.

ಜೆಡಿಎಸ್‌ ಕಾರ್ಯಕರ್ತರು ಶನಿವಾರ ಕೋಲಾರ ಶಾಸಕ ಕೆ. ಶ್ರೀನಿವಾಸಗೌಡ ಅವರ ತಿಥಿ ಕಾರ್ಡ್‌ ಸಿದ್ಧಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಬೆನ್ನಲ್ಲೇ, ಗುಬ್ಬಿ ಜೆಡಿಎಸ್‌ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಅವರ ತಿಥಿ ಕಾರ್ಡ್‌ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದಕ್ಕೆ ಪ್ರತಿಯಾಗಿ ಶ್ರೀನಿವಾಸ್‌ ಅಭಿಮಾನಿಗಳು, ‘ಎಚ್‌.ಡಿ.ಕುಮಾರಸ್ವಾಮಿ ಅವರ ಸಮಾರಾಧನೆ ಕಾರ್ಡ್‌’ ಮತ್ತು ‘ಕಾಣೆಯಾಗಿದ್ದಾರೆ’ ಎಂಬ ಎರಡು ಪ್ರತ್ಯೇಕಪೋಸ್ಟರ್‌ ತಯಾರಿಸಿ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ADVERTISEMENT

‘ಎಸ್‌.ಆರ್‌.ಶ್ರೀನಿವಾಸ್‌ ಗುಬ್ಬಿ ಎಂಎಲ್‌ಎ ಎಫ್‌ಸಿ‘ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ‘ಕುಮಾರಸ್ವಾಮಿ ತಿಥಿ ಕಾರ್ಡ್‌’ ಪೋಸ್ಟ್‌ ಹಾಕಲಾಗಿದೆ.

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಾರೆ ಎಂದು ಆರೋಪಿಸಿ ನಗರದ ವಿದ್ಯಾನಗರದಲ್ಲಿರುವ ಶಾಸಕರ ಮನೆ ಮುಂದೆ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ನಂತರ ಶಾಸಕ ಎಸ್‌.ಆರ್.ಶ್ರೀನಿವಾಸ್‌, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿವಿರುದ್ಧ ಏಕವಚನದಲ್ಲಿ ಹರಿಹಾಯ್ದಿದ್ದರು.

ಈ ಎಲ್ಲ ಬೆಳವಣಿಗೆಗಳ ನಂತರ ಶಾಸಕರ ಭಾವಚಿತ್ರದ ಸಹಿತ ತಿಥಿ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

‘ಈಗ ಶ್ರೀನಿವಾಸ್‌ ಅಭಿಮಾನಿಗಳು ಜೆ.ಪಿ ನಗರದ ನಿವಾಸಿ ಎಚ್‌.ಡಿ.ಕುಮಾರಸ್ವಾಮಿ ಜೂನ್‌ 11 ರಂದು ನಿಧನರಾಗಿದ್ದು, ಕೈಲಾಸ ಸಮಾರಾಧನೆಯು ಜೂನ್‌ 22 ರಂದು ನಡೆಯಲಿದೆ. ದುಃಖ ತೃಪ್ತರು ರಾಧಿಕಾ ಕುಮಾರಸ್ವಾಮಿ’ ಎಂದು ತಿಥಿ ಕಾರ್ಡ್‌ನಲ್ಲಿ ಬರೆಯಲಾಗಿದೆ.

‘ಕೈಲಾಸ ಸಮಾರಾಧನೆ’ ಪತ್ರ!: ಕೋಲಾರ ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡರ ಹೆಸರು ಹಾಗೂ ಅವರ ಫೋಟೊ ಹಾಕಿ ‘ಕೈಲಾಸ ಸಮಾರಾಧನೆ’ ಪತ್ರ ತಯಾರಿಸಿ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು.

ಫೇಸ್‌ಬುಕ್‌ನಲ್ಲಿ ‘ಕುಮಾರಸ್ವಾಮಿ ಫಾರ್‌ ಸಿಎಂ’ ಖಾತೆಯಲ್ಲಿ ಈ ಪತ್ರ ಹಾಕಿದ್ದು, ‘ಜೆಡಿಎಸ್‌ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಮೋಸ ಮಾಡಿ ದುಡ್ಡಿಗಾಗಿ ತಮ್ಮ ಮತ ಮಾರಿಕೊಂಡು, ಮತದಾರರ ಪಾಲಿಗೆ ತೀರಿಕೊಂಡ ಕೋಲಾರದ ಶ್ರೀನಿವಾಸಗೌಡನಿಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಬರೆದಿದ್ದಾರೆ.

800ಕ್ಕೂ ಅಧಿಕ ಮಂದಿ ಹಂಚಿಕೊಂಡಿದ್ದಾರೆ. 5 ಸಾವಿರಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದು, ಕಮೆಂಟ್‌ ಬಾಕ್ಸ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.