ADVERTISEMENT

ರಾಮಸೇನೆ ಮುಖಂಡನ ಬಂಧನ | ಕುಲಪತಿ ಹುದ್ದೆ ಆಮಿಷ: ₹ 17.5 ಲಕ್ಷ ಪಡೆದು ವಂಚನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 18:41 IST
Last Updated 29 ಮಾರ್ಚ್ 2021, 18:41 IST
ಪ್ರಸಾದ್ ಅತ್ತಾವರ
ಪ್ರಸಾದ್ ಅತ್ತಾವರ   

ಮಂಗಳೂರು: ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಮಾಡಿಸುವುದಾಗಿ ನಂಬಿಸಿ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರಿಂದ ₹17.5 ಲಕ್ಷ ಪಡೆದು ವಂಚಿಸಿದ ಆರೋಪದ ಮೇಲೆ ರಾಮಸೇನೆ ಮುಖಂಡ ಪ್ರಸಾದ್‌ ಅತ್ತಾವರ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಸಮಿತಿ ನಿರ್ದೇಶಕರಾಗಿರುವ ಡಾ.ಜೈಶಂಕರ್ ಅವರಿಗೆ, ವಿವೇಕ್‌ ಆಚಾರ್ಯ ಮೂಲಕ ಪ್ರಸಾದ್ ಅತ್ತಾವರ ಪರಿಚಯವಾಗಿದ್ದರು.

‘ಮುಖ್ಯಮಂತ್ರಿ ಸೇರಿದಂತೆ ಪ್ರಮುಖರ ಜೊತೆ ನಂಟು ಹೊಂದಿದ್ದು, ₹30 ಲಕ್ಷ ಕೊಟ್ಟರೆ ಕುಲಪತಿ ಮಾಡಿಸುತ್ತೇನೆ’ ಎಂದು ನಂಬಿಸಿದ್ದ ಪ್ರಸಾದ್‌ ಅತ್ತಾವರ, ಗಣ್ಯ ವ್ಯಕ್ತಿಗಳೊಂದಿಗೆ ತೆಗೆಸಿಕೊಂಡಿರುವ ಫೋಟೊಗಳನ್ನು ನೀಡಿದ್ದರು. ವಿವೇಕ ಆಚಾರ್ಯ ಅವರ ಮೂಲಕ ಪ್ರಾಧ್ಯಾಪಕರಿಂದ ₹17.5 ಲಕ್ಷ ಪಡೆದುಕೊಂಡಿದ್ದರು. ಉಳಿದ ಹಣಕ್ಕೆ 3 ಖಾಲಿ ಚೆಕ್‌ ಪಡೆದಿದ್ದರು.

ADVERTISEMENT

‘ವರ್ಷ ಕಳೆದರೂ ಯಾವುದೇ ಕೆಲಸ ಆಗಿರಲಿಲ್ಲ. ಮೋಸ ಹೋಗಿರುವುದು ಗೊತ್ತಾಗುತ್ತಿದ್ದಂತೆಯೇ ಪ್ರಾಧ್ಯಾಪಕರು ಹಣ ವಾಪಸ್‌ ಕೇಳಿದ್ದರು. ಆಗ ಪ್ರಸಾದ್ ಅತ್ತಾವರ ಬೈದು, ಜೀವ ಬೆದರಿಕೆ ಹಾಕಿದ್ದಾನೆ’ ಎಂದು ಕಂಕನಾಡಿ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ವಿವೇಕ್ ಆಚಾರ್ಯ ತಿಳಿಸಿದ್ದಾರೆ.

ವಿವಿಧ ಹಿಂದೂ ಸಂಘಟನೆಗಳ ನಂಟು ಹೊಂದಿರುವ ಪ್ರಸಾದ್ ಅತ್ತಾವರ, ಶ್ರೀರಾಮ ಸೇನೆ ಜಿಲ್ಲಾಘಟಕದ ಅಧ್ಯಕ್ಷನಾಗಿ, ರಾಜ್ಯ ಸಂಚಾಲಕನಾಗಿ ಕೆಲಸ ಮಾಡಿದ್ದರು. ಅಲ್ಲಿಂದ ಹೊರಬಂದು ರಾಮಸೇನೆಯನ್ನು ಆರಂಭಿಸಿದ್ದು, 2016 ರಲ್ಲಿ ಬಿಜೆಪಿ ಸೇರಿ
ದ್ದರು. 2009 ರಲ್ಲಿ ನಡೆದ ಅಮ್ನೇಷಿಯಾ ಪಬ್‌ ಮೇಲಿನ ದಾಳಿಯ ಪ್ರಮುಖ ಆರೋಪಿಯಾಗಿದ್ದು, ಆದರೆ, ಕೋರ್ಟ್‌ನಲ್ಲಿ ಆರೋಪ ಸಾಬೀತಾಗಿರಲಿಲ್ಲ.

‘ಪ್ರಸಾದ್ ಅತ್ತಾವರ ಹೆಸರು ಕಂಕನಾಡಿ ನಗರ ಹಾಗೂ ಮಂಗಳೂರು ಉತ್ತರ ಪೊಲೀಸ್‌ ಠಾಣೆಯ ರೌಡಿ ಪಟ್ಟಿಯಲ್ಲಿದ್ದು, ಇತರ ಠಾಣೆಗಳಲ್ಲೂ ದೂರುಗಳಿವೆ’ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್‌. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.