ADVERTISEMENT

ಧನ-ಜನಕ್ಕಿಂತ ಜ್ಞಾನ ಶಕ್ತಿಯೇ ಶ್ರೇಷ್ಠ: ರಾಘವೇಶ್ವರ ಭಾರತಿ ಸ್ವಾಮೀಜಿ

28ನೇ ಚಾತುರ್ಮಾಸ್ಯ ವ್ರತ ಕೈಗೊಂಡ ರಾಮಚಂದ್ರಾಪುರ ಮಠ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 16:20 IST
Last Updated 24 ಜುಲೈ 2021, 16:20 IST
ಚಾತುರ್ಮಾಸ್ಯ ವ್ರತ ಕೈಗೊಂಡ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ದೇವರಿಗೆ ಪೂಜೆ ಸಲ್ಲಿಸಿದರು.
ಚಾತುರ್ಮಾಸ್ಯ ವ್ರತ ಕೈಗೊಂಡ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ದೇವರಿಗೆ ಪೂಜೆ ಸಲ್ಲಿಸಿದರು.   

ಬೆಂಗಳೂರು: ‘ಜನ ಅಥವಾ ಧನ ಶಕ್ತಿಯಿಂದ ದೇಶವನ್ನು ಬದಲಿಸಲು ಸಾಧ್ಯವಾಗದು. ಆದರೆ, ಜ್ಞಾನ ಶಕ್ತಿಯನ್ನು ಹೊಂದಿದ್ದಲ್ಲಿ ಅದು ಸುಲಭ ಸಾಧ್ಯ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದಲ್ಲಿ 28ನೇ ಚಾತುರ್ಮಾಸ್ಯ ವ್ರತ ಕೈಗೊಳ್ಳುವ ವೇಳೆ ಶನಿವಾರ ಧಾರ್ಮಿಕ ಪ್ರವಚನ ನೀಡಿದ ಅವರು, ‘ಸೈನ್ಯ, ಕೋಶ ಅಥವಾ ಜನಸ್ತೋಮ ಇಲ್ಲದೆಯೇ ಶಂಕರಾಚಾರ್ಯರು ತಮ್ಮ ಜ್ಞಾನ ಪ್ರಭೆಯಿಂದ ಅಖಂಡ ಭಾರತದ ಪುನರುತ್ಥಾನ ಮಾಡಿದರು. ಅದೇ ರೀತಿ, ವಿಷ್ಣುಗುಪ್ತ ವಿಶ್ವವಿದ್ಯಾಪೀಠವು ಪ್ರಾಚೀನ ಜ್ಞಾನಪರಂಪರೆಯ ತಳಹದಿಯಲ್ಲಿ ದೇಶದ ಪುನರ್ನಿರ್ಮಾಣದತ್ತ ದೃಷ್ಟಿ ನೆಟ್ಟಿದೆ. ವಾಸ್ತು, ಆಯುರ್ವೇದ, ವೃಕ್ಷಾಯುರ್ವೇದ, ಸಾಮವೇದದಂಥ ಅಳಿವಿನ ಅಂಚಿನಲ್ಲಿರುವ ಹಲವು ವಿದ್ಯೆಗಳ ಪುನರುತ್ಥಾನ ಇಲ್ಲಿ ನಡೆಯಲಿದೆ’ ಎಂದರು.

‘ಗೋಕರ್ಣ ಮಂಡಲದ ವ್ಯಾಪ್ತಿಯಲ್ಲೇ ಹಂಚಿದ ಜ್ಞಾನದ ಬೆಳಕು ದೇಶ ಕಟ್ಟುವ ಜತೆಗೆ ವಿಶ್ವ ಬೆಳಗಬೇಕು. ಈ ಸಂಕಲ್ಪದೊಂದಿಗೆ ವಿಶ್ವವಿದ್ಯಾಪೀಠವನ್ನು ನಿರ್ಮಿಸಲಾಗುತ್ತಿದೆ. ಇದನ್ನೇ ಕೇಂದ್ರಬಿಂದುವಾಗಿ ಇಟ್ಟುಕೊಂಡು ಈ ಬಾರಿಯ ಚಾತುರ್ಮಾಸ್ಯವನ್ನು ವಿಶ್ವವಿದ್ಯಾ ಚಾತುರ್ಮಾಸ್ಯವಾಗಿ ಆಚರಿಸಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ, ‘ಜಗತ್ತಿನ ಎಲ್ಲ ಸಂಶೋಧನೆಗಳ ಮೂಲ ಭಾರತ. ಅದರ ಶಕ್ತಿ, ಸತ್ವ, ಸಿದ್ಧಾಂತಗಳನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಮಹಾನ್ ಸಂಕಲ್ಪವೇ ವಿಶ್ವವಿದ್ಯಾಪೀಠ. ಇಂತಹ ಪ್ರಯತ್ನಕ್ಕೆ ಇಡೀ ಸಮಾಜ ಕೈಜೋಡಿಸಬೇಕು’ ಎಂದು ಮನವಿ ಮಾಡಿಕೊಂಡರು.

ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ‘ಮಲೆನಾಡು ಸಿಂಧೂರಿ’ ಎಂಬ ಕೆಂಪಕ್ಕಿ ತಳಿಯನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.

ಶಾಸಕ ರವಿ ಸುಬ್ರಹ್ಮಣ್ಯ, ಮಠದ ಮಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ. ಭಟ್, ಚಾತುರ್ಮಾಸ್ಯ ಮಹಾಸಮಿತಿ ಗೌರವಾಧ್ಯಕ್ಷ ದಿವಾಣ ಕೇಶವ ಕುಮಾರ್, ಕ್ರಿಯಾಸಮಿತಿ ಗೌರವಾಧ್ಯಕ್ಷ ಜಿ.ಎಂ. ಹೆಗಡೆ ಹುಕ್ಲಮಕ್ಕಿ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಎಸ್.ಜಿ. ಭಟ್ ಮತ್ತಿತರರು ಇದ್ದರು.

‘ವಿಶ್ವವಿದ್ಯಾಪೀಠಕ್ಕೆ ಅಗತ್ಯ ನೆರವು’

‘ಮೆಕಾಲೆ ಶಿಕ್ಷಣ ಪದ್ಧತಿ ಸರಿಯಿಲ್ಲ ಎಂದು ವಿಶ್ಲೇಷಿಸಿದರೂ ಅದಕ್ಕೆ ಪರ್ಯಾಯ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರಲು ನಮಗೆ ಈವರೆಗೂ ಸಾಧ್ಯವಾಗಿಲ್ಲ. ಹೊಸ ಶಿಕ್ಷಣ ನೀತಿ ಜಾರಿಗೆ ಬರುವ ಮೂರು ವರ್ಷಗಳ ಮೊದಲೇ ನೂತನ ನೀತಿಯ ಎಲ್ಲ ಅಂಶಗಳನ್ನು ಒಳಗೊಂಡ ಹಾಗೂ ಅದಕ್ಕೂ ಮಿಗಿಲಾದ ಪರಿಕಲ್ಪನೆಯನ್ನು ವಿಶ್ವವಿದ್ಯಾಪೀಠದ ತಳಪಾಯದ ಮೂಲಕ ಮಠ ಸಾಕಾರಗೊಳಿಸಿದೆ. ಈ ವಿದ್ಯಾಪೀಠದ ಕಾರ್ಯಕ್ಕೆ ಕೇಂದ್ರ ಸರ್ಕಾರ ಎಲ್ಲ ಅಗತ್ಯ ನೆರವು ನೀಡಲಿದೆ’ ಎಂದು ಸಂಸದ ತೇಜಸ್ವಿ ಸೂರ್ಯ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.