ಬೆಂಗಳೂರು: ‘ರಾಜ್ಯ ಬಿಜೆಪಿಯ ಸುಳ್ಳಿನ ಕಾರ್ಖಾನೆ ಮತ್ತೆ ಓವರ್‌ಟೈಮ್ ಕೆಲಸ ಮಾಡುತ್ತಿದೆ. ಬಿಹಾರ ಚುನಾವಣೆಗೆ ಕಾಂಗ್ರೆಸ್ ಸರ್ಕಾರ ಹಣ ನೀಡುತ್ತಿದೆ ಎಂಬ ನಿಮ್ಮ ಕಪೋಲಕಲ್ಪಿತ ಆರೋಪ ಹಾಸ್ಯಾಸ್ಪದ. ನಿಮ್ಮ ಸುಳ್ಳಿನ ಸರಮಾಲೆಗೆ ಕೊನೆಯೇ ಇಲ್ಲವೇ’ ಎಂದು ಬಿಜೆಪಿ ನಾಯಕರನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.
‘ಚುನಾವಣೆಗೆ ಅಕ್ರಮ ಭ್ರಷ್ಟಾಚಾರದ ಹಣವನ್ನು ಬಳಸುವುದು ನಿಮ್ಮ ಜಾಯಮಾನ, ಕಾಂಗ್ರೆಸ್‌ನದ್ದಲ್ಲ. 2008-2013 ಮತ್ತು 2019-2023ರ ಅವಧಿಗಳಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಜಗದೀಶ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ಚುನಾವಣೆಗಳು ನಡೆದವು. ಆಗ ಕರ್ನಾಟಕದ ಸಂಪತ್ತನ್ನು ಆ ಚುನಾವಣೆಗಳಿಗೆ ಕಳುಹಿಸಿರುವ ನಿಮಗೆ, ಜನತೆಯ ಮುಂದೆ ಉತ್ತರಿಸುವ ಧೈರ್ಯ ಇದೆಯೇ’ ಎಂದೂ ಕೇಳಿದ್ದಾರೆ.
‘ಹಣದ ಹೊಳೆ ಹರಿಸಿ, ಶಾಸಕರನ್ನು ಕುದುರೆಗಳಂತೆ ಖರೀದಿಸಿ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡಿದ ‘ಆಪರೇಷನ್ ಕಮಲ’ದ ಪಿತಾಮಹರು ನೀವು. ಇಂದು ಶುದ್ಧ ಹಸ್ತರೆಂದು ಬಿಂಬಿಸಿಕೊಳ್ಳಲು ಹೊರಟಿರುವುದು ಅತಿದೊಡ್ಡ ಜೋಕ್. ಅಧಿಕಾರಕ್ಕಾಗಿ ನೀವು ಖರೀದಿಸಿದ ಕ್ರಿಮಿನಲ್ ಹಿನ್ನೆಲೆಯ ಶಾಸಕರನ್ನು ಕರ್ನಾಟಕ ಎಂದಿಗೂ ಮರೆಯುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.